2455 ಪ್ರಕರಣ ಇತ್ಯರ್ಥ
ಕ.ಪ್ರ. ವಾರ್ತ್ಣೆ ಗುಲ್ಬರ್ಗ ನ. 23
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಗುಲ್ಬರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಗುಲ್ಬರ್ಗ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಲೋಕ ಅದಾಲತ್ಗಳಲ್ಲಿ ಒಟ್ಟು 2455 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಇವುಗಳಲ್ಲಿ ಕಕ್ಷಿದಾರರಿಗೆ ಒಂದು ಕೋಟಿ ಎರಡು ಲಕ್ಷ ಮೂವತ್ನಾಲ್ಕು ಸಾವಿರ ರು.ಗಳ ಪರಿಹಾರ ದೊರಕಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಡಿ.ಆರ್. ವೆಂಕಟ ಸುದರ್ಶನ ತಿಳಿಸಿದರು.
ಗುಲ್ಬರ್ಗದ ಬಾರ್ ಅಸೋಸಿಯೇಷನ್ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಾರ್ ಅಸೋಸಿಯೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
30, 038 ಪ್ರಕರಣಗಳು ಬಾಕಿ: ಜಿಲ್ಲೆಯಲ್ಲಿ ಒಟ್ಟು 33 ನ್ಯಾಯಾಲಯಗಳಿದ್ದು, ಇವುಗಳಲ್ಲಿ ಇಲ್ಲಿಯವರೆಗೆ 30, 038 ಪ್ರಕರಣಗಳು ಬಾಕಿಯಿವೆ. ಈ ಪೈಕಿ 15,618 ಸಿವಿಲ್ ಮತ್ತು 14,420 ಕ್ರಿಮಿನಲ್ ಪ್ರಕರಣಗಳಾಗಿವೆ. ಇವುಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅಕ್ಟೋಬರ್ 7 ರಿಂದ ಪ್ರತಿದಿನ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಪ್ರತಿದಿನ ಲೋಕ್ ಅದಾಲತ್ ಮುಂದುವರೆಯಲಿದ್ದು, ಒಟ್ಟು 3000 ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರಿ ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರು ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು. 15 ದಿನಗಳವರೆಗೆ ಹಮ್ಮಿಕೊಂಡಿದ್ದ ಲೋಕ್ ಅದಾಲತ್ನಲ್ಲಿ 15 ವರ್ಷದಷ್ಟು ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಸಹಕರದಿಂದ ಯಶಸ್ಸು: ವಕೀಲರು, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ನ್ಯಾಯಾಧೀಶರು, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜೆಸ್ಕಾಂ, ಬಿಎಸ್ಎನ್ಎಲ್, ಜೀವ ವಿಮಾ ಕಂಪನಿಗಳು ಸಹಕರಿಸಿದ್ದರಿಂದ ಈ ಲೋಕ್ ಅದಾಲತ್ ಯಶಸ್ವಿಗೊಳ್ಳಲು ಪ್ರಮುಖ ಕಾರಣ ಎಂದು ನ್ಯಾಯಾಧೀಶರು ಅಭಿನಂದಿಸಿದರು.
ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ಗುಂಜಿಗಾವಿ ಮಾತನಾಡಿ, ಎಲ್ಲರಿಗೂ ತ್ವರಿತ ಮತ್ತು ಸರಿಸಮಾನ ನ್ಯಾಯ ಒದಗಿಸುವುದು ಮುಖ್ಯ ಎಂದರು.
ಬ್ಯಾಂಕುಗಳಿಗೆ ಸಂಬಂಧಿಸಿದ ಡಿ ಲಿಟಿಗೇಷನ್ ವ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ನೋಂದಣಿಯಾಗಿವೆ. ಇವುಗಳನ್ನು ಮುಂದಿನ ವಾರದಿಂದ ಒಂದೊಂದು ಬ್ಯಾಂಕುಗಳಿಗೆ ಸಮಯಾವಕಾಶ ನೀಡಿ ಸಮಾಲೋಚನೆ ಮಾಡಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುವುದು. ಸದ್ಯ ನೋಂದಣಿಯಾಗಿರುವ ಬ್ಯಾಂಕುಗಳ ವ್ಯಾಜ್ಯಗಳಲ್ಲಿ ಶೇ.95ರಷ್ಟು ಸಂಧಾನದ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆ. ಯೂಸೂಫ್, ಕಾರ್ಯದರ್ಶಿ ಬಿ.ಕೆ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ವಿಜಯನ್ ಉಪಸ್ಥಿತರಿದ್ದರು.
ಸುರಪುರ ಅದಾಲತ್: ಜಿಲ್ಲೆಗೆ ಪ್ರಥಮ
ಸುರಪುರ: ಕಕ್ಷಿದಾರರು ಯಾವುದೇ ಒತ್ತಾಯವಿಲ್ಲದೆ, ಯಾರ ಒತ್ತಾಯಕ್ಕೂ ಮಣಿಯದೆ ಸ್ವಇಚ್ಛೆಯಿಂದ ರಾಜಿ ಒಪ್ಪಂದವಾಗಿರುವುದು ಸಂತಸ ತಂದಿದೆ. ಒಂದು ತಿಂಗಳನಿಂದ ಜರುಗಿದ ಬೃಹತ್ ಲೋಕಅದಾಲತ್ನಲ್ಲಿ 130 ಪ್ರಕರಣಗಳು ಒಪ್ಪಂದದ ಮೂಲಕ ಇತ್ಯರ್ಥಗೊಳಿಸಿದೆ. ಇದರಿಂದ ಜಿಲ್ಲೆಯಲ್ಲಿ ಸುರಪುರ ನ್ಯಾಯಾಲಯ ಪ್ರಥಮ ಸ್ಥಾನ ಗಳಿಸಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಶಶಿಧರಗೌಡ ಹೇಳಿದರು.
ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ಬೃಹತ್ ಲೋಕ ಆದಾಲತ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಈ ಹಿಂದೆ ಇಲ್ಲಿಯ ನ್ಯಾಯಾಧೀಶರಾಗಿದ್ದ ಮಂಜುಳಾ ಉಂಡಿ ಅಧ್ಯಕ್ಷತೆಯಲ್ಲಿ ಹೆಚ್ಚು ರಾಜೀ ಒಪ್ಪಂದಗಳು ಇತ್ಯರ್ಥವಾಗಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. 130 ಪ್ರಕರಣಗಳು ಇತ್ಯರ್ಥ್ಥವಾಗಿರುವುದ ಹಿಂದೆ ಹಲವಾರು ಕೈಗಳ ಶ್ರಮವಿದೆ ಎಂದು ಸ್ಮರಿಸಿದರು.
ಕಕ್ಷಿದಾರರ ಹಿತದೃಷ್ಟಿ: ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಲೋಕ ಅದಾಲತ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಇಲ್ಲಿನ ವಕೀಲರ ಸಂಘದ ವಕೀಲರು ತಮ್ಮ ಹಾನಿಯನ್ನು ಲೆಕ್ಕಿಸಿದೆ ಕಕ್ಷಿದಾರರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ರಾಜಿ ಒಪ್ಪಂದದ ಲೋಕ ಅದಾಲತ್ಗೆ ಸಹಕರಿಸಿದ್ದಾರೆ. ಇಷ್ಟೊಂದು ಪ್ರಕರಣಗಳ ಇತ್ಯರ್ಥಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಶ್ರಮವಹಿಸಿದೆ. ಎಲ್ಲರ ನೆರವಿನೊಂದಿಗೆ ನಾವು ಸಾಧನೆ ಮಾಡಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಪಾಟೀಲ್, ವಕೀಲರಾದ ಅಪ್ಪಾಸಾಹೇಬ ಪಾಟೀಲ್, ವ್ಯಾಸರಾಜ್ ಸರಾಫ್ ಮಾತನಾಡಿದರು. ಉಪಾಧ್ಯಕ್ಷ ಮೊಹ್ಮದ ಹುಸೇನ್, ವಕೀಲರಾದ ಬಸವಲಿಂಗಪ್ಪ ಪಾಟೀಲ್, ದೇವಿಂದ್ರಪ್ಪ ಬೇವಿನಕಟ್ಟಿ, ಜಿ.ಎಸ್. ಪಾಟೀಲ್, ಉದಯಸಿಂಗ್, ಜಿ. ತಮ್ಮಣ್ಣ, ವಿ.ಎಸ್. ಜೋಷಿ ವೇದಿಕೆಯಲ್ಲಿದ್ದರು.
ವಕೀಲರಾದ ಸಿದ್ರಾಮಪ್ಪ, ರಮಾನಂದ ಕವಲಿ, ನಂದನಗೌಡ ಪಾಟೀಲ್, ಬಸವರಾಜ ಅನ್ಸೂರು, ಬಿ.ಎಸ್. ಬೈಚಬಾಳ್, ನಂದಣ್ಣ ಬಾಕ್ಲಿ, ಸುರೇಂದ್ರ ದೊಡ್ಡಮನಿ, ಚನ್ನಮಲ್ಲ ಸಾಲಿಮನಿ, ಮಂಜುನಾಥ ಗುಡುಗುಂಟಿ, ಆದಪ್ಪ ಹೊಸ್ಮನಿ, ಸಂಗಣ್ಣ ಗುಳಗಿ, ಬಲಭೀಮನಾಯಕ ಇನ್ನಿತರರಿದ್ದರು. ಸಂಗಣ್ಣ ಬಾಕ್ಲಿ ಸ್ವಾಗತಿಸಿದರು. ಜಿ.ಆರ್. ಬನ್ನಾಳೆ ನಿರೂಪಿಸಿದರು. ಮನೋಹರ ವಂದಿಸಿದರು.