ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕಬ್ಬು ದರ ನಿಗದಿಗೆ ಕಾರ್ಖಾನೆ ಮುಖ್ಯಸ್ಥರು, ರೈತರ ಸಭೆ ಕರೆಯಿರಿ'ಇದುವರೆಗೂ ಸಭೆ ಕರೆಯದೇ ಡಿಸಿ ನಿರ್ಲಕ್ಷ್ಯ: ಶಾಂತಕುಮಾರ್

Vishwanath S
Updated On : 24 Nov 2013, 3:00 am

ಗುಲ್ಬರ್ಗ: ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 3500 ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಕಲ್ಯಾಣ ಕರ್ನಾಟಕ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಕಳೆದ ಅ.25ರಂದು ಈ ಕುರಿತು ಜಿಲ್ಲಾಧಿಕಾರಿಗೆ ನಿಯೋಗ ಭೇಟಿ ಮಾಡಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಪ್ರಮುಖರೊಂದಿಗೆ ಚರ್ಚಿಸಿ ಅಂತಿಮ ಬೆಲೆ ನಿಗದಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ಜಿಲ್ಲಾಧಿಕಾರಿ ಯಾವುದೇ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿರುವ ಕ್ರಮವನ್ನು ಖಂಡಿಸಿ ಸಾವಿರಾರು ಕಬ್ಬು ಬೆಳೆಗಾರರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬರ ಶಾಂತಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
35ರಿಂದ 40ಲಕ್ಷ ಟನ್ ಕಬ್ಬು: ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಸುಮಾರು 35ರಿಂದ 40ಲಕ್ಷ ಟನ್ ಕಬ್ಬು ಬೆಳೆದಿದ್ದಾರೆ. ಸರ್ಕಾರ 2500 ಪ್ರತಿಟನ್ ಕಬ್ಬಿಗೆ ಬೆಲೆ ನಿಗದಿ ಮಾಡಿದೆ. ಆದರೆ, ನ.20 ರಂದು ಬಿಜಾಪುರ, ಗುಲ್ಬರ್ಗ, ಯಾದಗಿರಿ ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಹಂಗಾಮಿನಲ್ಲಿ ಪತ್ರಿಟನ್ ಕಬ್ಬಿಗೆ ಕೇವಲ 1800 ನೀಡುವುದಾಗಿ ಪ್ರಕಟಣೆ ನೀಡಿರುವುದರಿಂದ ಕಬ್ಬು ಬೆಳೆಗಾರರು ತೀವ್ರ ಆತಂಕಗೊಂಡಿದ್ದಾರೆ. ಕೂಡಲೇ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ 3500 ಬೆಲೆ ನಿಗದಿಪಡಿಸಲು ಕುರುಬರ ಶಾಂತಕುಮಾರ್ ಆಗ್ರಹಿಸಿದರು.
ಪರಿಹಾರ ಮನವಿ: ಕಠಾವಿನ ಸಮಯದಲ್ಲಿ ಕಾರ್ಮಿಕರು ಮತ್ತು ಲಾರಿಯವರು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಇದನ್ನು ಕೂಡಲೇ ತಪ್ಪಿಸಬೇಕು, ಪ್ರತಿವರ್ಷ ಕಠಾವು ಆದ ನಂತರ ಕಾನೂನು ಬದ್ಧವಾಗಿ 15 ದಿನದೊಳಗಾಗಿ ಕಬ್ಬಿನ ಬಿಲ್ಲು ಪೂರ್ತಿ ಪ್ರಮಾಣದಲ್ಲಿ ಪಾವತಿಸಬೇಕು ಮತ್ತು ರೈತರು ಕಬ್ಬು ಯಾವುದೇ ಕಾರಣದಿಂದ ಕಠಾವು ಮಾಡಲು ಆಗದಿದ್ದರೆ ಕಾರ್ಖಾನೆಯಿಂದ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ ಮನವಿ ಪತ್ರ ಸ್ವೀಕರಿಸಿ ಎರಡು ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಬೆಲೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಗದೀಶ ಪಾಟೀಲ್ ರಾಜಾಪುರ, ಶಿವಕುಮಾರ್, ಶರಣಗೌಡ ಪಾಟೀಲ್, ಶಾಂತವೀರ ಪಾಟೀಲ್ ದಸ್ತಾಪುರ, ರಮೇಶ ಎಸ್. ಹೂಗಾರ, ಬಸವರಾಜ ಪವಾಡಶೆಟ್ಟಿ, ಜೈಕವೇ ನಾಯಕ ಅರಣಕುಮಾರ್ ಪಾಟೀಲ್, ಸಾವಿರಾರು ಬೆಳೆಗಾರರು ಇದ್ದರು.
ಬಾಕಿ ಹಣ ನೀಡಿ
ಚಿಂಚೋಳಿ ತಾಲೂಕಿನ ಕಾರ್ಖಾನೆ ನೆನೆಗುದಿಗೆ ಬಿದ್ದು 15 ವರ್ಷವಾಗಿದೆ. ಕಬ್ಬು ಬೆಳೆಗಾರರಿಗೆ ತೊಂದರೆಯಾಗಿದ್ದು, ಕೂಡಲೇ ಕಾರ್ಖಾನೆ ಪ್ರಾರಂಭಿಸಿ, ಇಲ್ಲವೆ ಕಾರ್ಖಾನೆ ಲೈಸನ್ಸ್ ರದ್ದು ಪಡಿಸಬೇಕೆಂದು ಒತ್ತಾಯಿಸಿದರು. ಯಾದಗಿರಿ ಜಿಲ್ಲೆಯ ಕೋರಗ್ರೀನ್ ಸಕ್ಕರೆ ಕಾರ್ಖಾನೆಯವರಿಂದ ಕೆಲವು ರೈತರಿಗೆ ಕಬ್ಬಿನ ಹಣ ಪೂರ್ತಿ ಸಂದಾಯವಾಗಿಲ್ಲ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement