ಡಿ.19ರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್
ಗುಲ್ಬರ್ಗ: ದಕ್ಷಿಣ ಕನ್ನಡ ಭಾಗಕ್ಕೆ ಅಷ್ಟೇ ಸೀಮಿತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಂಚಾಲಿತ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾಷಾಭಿಮಾನ ಮತ್ತು ದೇಶೀಯ ಸಾಂಸ್ಕೃತಿಕ ಶ್ರೀಮಂತಿಕೆಯ ಕುರಿತು ಜನರಲ್ಲಿ ಜಾಗೃತಿ ಹಾಗೂ ಅಭಿಮಾನ ಹುಟ್ಟಿಸುವ ಕಾರ್ಯಕ್ರಮಗಳ ಮೂಲಕ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ವೈಭವವನ್ನು ಎಲ್ಲ ಜಿಲ್ಲೆಯ ಜನತೆಗೆ ಪರಿಚಯಿಸಲಾಗುತ್ತಿದೆ ಎಂದರು.
ಜಾಗತೀಕರಣದ ಹೊಸ ಅಭಿವೃದ್ಧಿ ಶಕೆಯಲ್ಲಿ ನಮ್ಮ ದೇಶೀಯ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಭಾಷಿಕ ವೈವಿಧ್ಯಗಳಿಗೆ ಅಪಾಯ ಬರುತ್ತಿರುವ ಇಂದಿನ ದಿನಗಳಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಬಳಗ ಅದ್ಧೂರಿ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಜನರಲ್ಲಿ ದೇಶೀ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಜೈನಕಾಶಿ ಮೂಡಬಿದಿರೆಯಲ್ಲಿ ಡಿ.19 ರಿಂದ 22 ರವರೆಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಬೃಹತ್ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಉತ್ಸವ ಆರಂಭಕ್ಕೆ ಮುನ್ನ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಎಲ್ಲ ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಾಯಿಸಿ ಅವರನ್ನು ಈ ಉತ್ಸವಕ್ಕೆ ಪಾಲ್ಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರತಿವರ್ಷ ಉತ್ಸವಕ್ಕೆ 3 ಕೋಟಿ ವೆಚ್ಚವಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಸುಮಾರು 15 ಕೋಟಿ ವೆಚ್ಚವಾಗುವ ಸಾಧ್ಯತೆಗಳಿವೆ. 5 ಲಕ್ಷಗಳಲ್ಲಿ ಕನ್ನಡ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಸಂಸ್ಥೆಯ ತನ್ನ ಅಡಿಯಲ್ಲಿ ಎಸ್ಎಸ್ಎಲ್ಸಿವರೆಗೆ ಉಚಿತ ಕನ್ನಡ ಶಿಕ್ಷಣ ನೀಡುವುದರ ಜತೆಗೆ ವಿದ್ಯಾರ್ಥಿಗಳ ಸಂಪೂರ್ಣ ಪರೀಕ್ಷಾ ಶುಲ್ಕ, ವಸತಿ ಸೌಲಭ್ಯ ಕಲ್ಪಿಸುತ್ತಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ, ಗೌರವಾಧ್ಯಕ್ಷ ಡಾ. ಪಿ.ಎಸ್. ಶಂಕರ, ಪ್ರ.ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್, ಸದಾನಂದ ಪೆರ್ಲ, ನರಸಿಂಹ ಮೆಂಡೆಲ್ ಉಪಸ್ಥಿತರಿದ್ದರು.
ಆಳ್ವಾಸ್ ಸಾಂಸ್ಕ ೃತಿಕ ವೈಭವ ಅನಾವರಣ
ಗುಲ್ಬರ್ಗ: ಶನಿವಾರ ಸಂಜೆ ನಗರದಲ್ಲಿ ನಡೆದ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಗುಲ್ಬರ್ಗ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.
ಸಮಯಕ್ಕೆ ಅತ್ಯಂತ ಮಹತ್ವ ನೀಡುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಪ್ರತಿಷ್ಠಾನವು ಬರುವ ಡಿ.19 ರಿಂದ 22 ರವರೆಗೆ ಮೂಡುಬಿದಿರೆಯಲ್ಲಿ ಆಯೋಜಿಸುವ ವಿಶ್ವನುಡಿಸಿರಿ ವಿರಾಸತ್ ಉತ್ಸವದ ಪೂರ್ವಭಾವಿಯಾಗಿ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ ಪ್ರತಿನಿಧಿಗಳನ್ನು ಸಂಘಟಿಸಲು ಜಿಲ್ಲಾ ಘಟಕಗಳನ್ನು ರಚಿಸಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸುತ್ತಿದ್ದು, ಶನಿವಾರ ಗುಲ್ಬರ್ಗದಲ್ಲಿ ನಡೆದ ಸಾಂಸ್ಕೃತಿಕ ವೈಭವ ಜನರ ಗಮನ ಸೆಳೆಯಿತು.
ಸುಮಾರು 150 ಪ್ರತಿಭಾವಂತ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿ ವೈಭವ ಸಾವಿರಾರು ಜನತೆಗೆ ರಸದೌತಣ ಉಣಬಡಿಸಿತು. ಊಡುಗೆ, ತೊಡಿಗೆ, ಕೋಲಾಟ, ರಾಶಿ ಮಾಡುವುದು ಸೇರಿದಂತೆ ಜೀವನದ ಪ್ರತಿ ಹಂತದಲ್ಲೂ ಇಲ್ಲಿ ಹಾದು ಹೋದವು. ಬಡಗುತಿಟ್ಟು ಯಕ್ಷಪ್ರಯೋಗ ದಶಾವತಾರ ಪ್ರತಿ ಹಂತದಲ್ಲೂ ನಿಂತ ನಿಂತಲ್ಲಿ ಕುಣಿಯುವಂತೆ ಮಾಡಿತು.
ಪಶ್ಟಿಮ ಬಂಗಾಳದ ಪುರುಲಿಯಾ ಸಿಂಹದ ಭೇಟೆ ನೃತ್ಯ, ದೇವ ವೃದ್ಧರು ಕಿರುನಾಟಕ, ಆಂಧ್ರದ ಜನಪದ ಬಂಜಾರ ನೃತ್ಯ, ಕಥಕ್ ಸಮ್ಮೋಹನಂ, ಶ್ರೀಲಂಕಾ ನವಿಲು ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಣಿಪುರಿ ದೋಲ್ ಚಲಮ್, ಕೇರಳದ ಒಪ್ಪಣಂ, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕುತಿಟ್ಟು ಯಕ್ಷಗಾನದ ಹನುಮ ಒಡ್ಡೋಲಗ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಕರ್ನಾಟಕದ ಜನಪದ ನೃತ್ಯ, ಗೀಗೀ ಪದ ಮುಂತಾದ ಬೆರಗು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.