ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜರ್ಮನಿಯಲ್ಲಿ 3 ಕನ್ನಡ ಅಧ್ಯಯನ ಪೀಠ

Lingaraj Badiger
Updated On : 25 Nov 2013, 11:21 am

ಗುಲ್ಬರ್ಗ:  ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಸಕ್ತ ವರ್ಷದಿಂದ ಜರ್ಮನಿಯ ಹೂಸ್‌ಬರ್ಗ್, ಹೈಡಲ್‌ಬರ್ಗ್ ಮತ್ತು ಮುನಿಚ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ತೆರೆಯಲಾಗಿದೆ. ಅದಕ್ಕೆ ತಲಾ 1 ಕೋಟಿ ಮೀಸಲಿರಿಸಲಾಗಿದೆ.  ಹೊರರಾಜ್ಯದ ಜೆಎನ್‌ಯು, ಬನಾರಸ್ ವಿಶ್ವವಿದ್ಯಾಲಯಗಳಲ್ಲೂ ಅಧ್ಯಯನ ಪೀಠ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ 2013-14ನೇ ಸಾಲಿಗೆ ಗುಲ್ಬರ್ಗ ವಿಭಾಗದ ವಿದ್ಯಾರ್ಥಿಗಳಿಗೆ, ಹೊರ ರಾಜ್ಯ ಆಂಧ್ರಪ್ರದೇಶದ ಕನ್ನಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಕನ್ನಡ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾಧಿಕಾರ ನೀಡುವ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರೋಜಿನಿ ಮಹಿಷಿ ವರದಿ ಪ್ರಸ್ತುತವಾಗಿ ಯಥಾವತ್ತಾಗಿ ಅನುಷ್ಠಾನ ಅಸಾಧ್ಯ, ವರದಿ ತಿದ್ದುಪಡಿಯಾಗಬೇಕಿದೆ. ಹೊರರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಆಯಾ ರಾಜ್ಯಗಳು ಪಠ್ಯಪುಸ್ತಕವನ್ನು ಕಲ್ಪಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆಯಾ ರಾಜ್ಯ ಸರ್ಕಾರಗಳು ಕಲ್ಪಿಸದಿದ್ದದಲ್ಲಿ ಕರ್ನಾಟಕ ಸರ್ಕಾರ ಪಠ್ಯಪುಸ್ತಕವನ್ನು ಪ್ಯೂರೈಸಬೇಕು. ಇಲ್ಲದಿದ್ದರೆ ಪ್ರಾಧಿಕಾರ ಮುಂದಾಗುತ್ತದೆ ಎಂದ ಅವರು, ಬೆಳಗಾವಿಯಲ್ಲಿ ಕೆಲ ಸಂಘಟನೆಗಳು ಗಡಿ ಭಾಗದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಶಾಂತಿ ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇಂತಹ ಸಂಘಟನೆಗಳ ವಿರುದ್ಧ ಸರ್ಕಾರ ನಿಷ್ಠುರ ಕ್ರಮ ಕೈಗೊಳ್ಳುವ ಬದಲು ಕನ್ನಡಪರ ಹೋರಾಟ ಮಾಡುವ ಸಂಘಟನೆಗಳ ಮೇಲೆ ಗುಂಡಾ ಕಾಯ್ದೆಯಡಿ ಕೇಸು ದಾಖಲಿಸಿರುವುದು ದುರಾದೃಷ್ಟಕರ ಎಂದರು.
ಕೂಡಲೇ ಅಲ್ಲಿನ ಜಿಲ್ಲಾಡಳಿತ ರಾಜ್ಯ ವಿಧಾನಸಭೆ ಅಧಿವೇಶನ ಆರಂಭಕ್ಕೆ ಮುನ್ನವೇ ಕೇಸು ಹಿಂತೆಗೆದುಕೊಳ್ಳಬೇಕು ಕರ್ನಾಟಕದ ಐಟಿ-ಬಿಟಿ ಕಂಪನಿಗಳಲ್ಲಿಕನ್ನಡಿಗರಿಗೆ ಉದ್ಯೋಗ ನೀಡಲು ಸಂಬಂಧಿಸಿದ ಕಂಪನಿಗಳಿಗೆ ಸರ್ಕಾರ ಆದೇಶಿಸಬೇಕು ಎಂದರು.
ಹೊರರಾಜ್ಯದ 7 ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಎಂ.ಎ. ಕನ್ನಡ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ 2000 ಗಳಂತೆ ವಾರ್ಷಿಕ 20000 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಹೊರನಾಡ ಕನ್ನಡಿಗರಿಗೂ ಸೌಲಭ್ಯ ಸಿಗಬೇಕು:  ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂ.ವೀರಭದ್ರಪ್ಪ (ಕುಂವೀ) ಮಾತನಾಡಿ, ಕರ್ನಾಟಕ ರಾಜ್ಯವು ರಾಜಕೀಯ ಮತ್ತು ಭಾವನಾತ್ಮಕವಾಗಿ ತನ್ನ ನಕ್ಷೆ ಹೊಂದಿದೆ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಗುರುತಿಸಿಕೊಂಡಿರುವ ಹೊರನಾಡ ಕನ್ನಡ ವಿದ್ಯಾರ್ಥಿಗಳಿಗೂ ಸಿಗುವಂತಾಗಬೇಕು ಎಂದರು.
ಪ್ರತಿ ತಾಲೂಕಿಗೆ ಮೂವರರಂತೆ ಗುಲ್ಬರ್ಗ ವಿಭಾಗದ ಎಸ್‌ಎಸ್‌ಎಲ್ಸಿ-108 (ರಾಜ್ಯಕ್ಕೆ ಪ್ರಥಮ ಸ್ಫೂರ್ತಿ ಜಿ.ಮಾಲಿ ಬಿರಾದಾರ, 35 ಪ್ರಥಮ, 35 ದ್ವಿತೀಯ, 37 ತೃತೀಯ), ಪಿಯುಸಿ-100 (32 ಪ್ರಥಮ, 33 ದ್ವಿತೀಯ, 35 ತೃತೀಯ) ಸೇರಿದಂತೆ ಒಟ್ಟು 208 ವಿದ್ಯಾರ್ಥಿಗಳು ಮತ್ತು ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶಾಲಾಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ 59 ಎಸ್‌ಎಸ್‌ಎಲ್ಸಿ (15 ಪ್ರಥಮ, 21 ದ್ವಿತೀಯ, 23 ತೃತೀಯ) ಮತ್ತು 2 ಪಿಯುಸಿ (1 ಪ್ರಥಮ, 1 ದ್ವಿತೀಯ) ವಿದ್ಯಾರ್ಥಿಗಳನ್ನು ಸೇರಿದಂತೆ ಒಟ್ಟು 61 ವಿದ್ಯಾರ್ಥಿಗಳಿಗೆ ನಗದು ಬಹುಮಾನ (ಪ್ರಥಮ-8000, ದ್ವಿತೀಯ-7000, ತೃತೀಯ-6000) ಗಳಲ್ಲದೆ ಸ್ಮರಣಿಕೆ, ಕನ್ನಡ-ಕನ್ನಡ ನಿಘಂಟು, ಕನ್ನಡ-ಅಂಗ್ಲ ನಿಘಂಟು, ಕೈಗಡಿಯಾರ, ಶಾಲಾ ಬ್ಯಾಗ್ ಮತ್ತು ಪೆನ್ ನೀಡಿ ಸತ್ಕರಿಸಲಾಯಿತು.
ಡಿಸಿ ಡಾ.ಎನ್.ವಿ.ಪ್ರಸಾದ, ಹಿರಿಯ ಸಾಹಿತಿ ಎಂ.ಜಿ.ಬಿರಾದಾರ, ರೇವುರ ಬಮಲಿಂಗೇಶ್ವರ ಹೀರೆಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಉಪಸ್ಥಿತರಿದ್ದರು.
ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಸ್ವಾಗತಿಸಿ ನಿರೂಪಿಸಿದರು. ಆಂಧ್ರಪ್ರದೇಶ ಗಡಿನಾಡು ಕನ್ನಡ ಸಂಘದ ರಾಮಲಿಂಗಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement