ರೈತರ ನಡುಗಿಸಿದ 'ಹೆಲೆನ್'
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.24
ಪಕ್ಕದ ಆಂಧ್ರಪ್ರದೇಶದಲ್ಲಿ ಕಳೆದೆರಡು ದಿನದಿಂದ ತನ್ನ ಪ್ರಭಾವ ತೋರಿಸುತ್ತಿರುವ ಹೆಲೆನ್ ಚಂಡಮಾರುತದ ಪರಿಣಾಮಕ್ಕೆ ಭಾನುವಾರ ಗುಲ್ಬರ್ಗ ಮಹಾನಗರವೂ ಸಾಕ್ಷಿಯಾಗಿದೆ.
ಇಲ್ಲಿಯೂ ಮಧ್ಯಾಹ್ನ 20 ನಿಮಿಷಗಳ ಕಾಲ ಮಳೆ ಸುರಿಯಿತು. ಶುಕ್ರವಾರ, ಶನಿವಾರ ಕೇವಲ ಮೋಡ ಕವಿದ ವಾತಾವರಣ ನಗರದಲ್ಲಿತ್ತು. ಭಾನುವಾರ ಮೋಡದ ಜೊತೆಗೇ ಮಳೆಯು ಸುರಿದಾಗ ನಗರವಾಸಿಗಳಂತೂ ಹೆಲೆನ್ ಪ್ರಭಾವ ಇಲ್ಲಿಯೂ ಕಂಡಿತಲ್ಲ ಎಂದು ಕಂಗಾಲಾದರು.
ಆದರೆ ಕೇವಲ ಹತ್ತಿಪ್ಪತ್ತು ನಿಮಿಷ ಕಾಲ ಮಾತ್ರ ಸುರಿದ ಮಳೆ ತಕ್ಷಣ ನಿಂತಿತು. ಮರುಕ್ಷಣವೇ ಬಿಸಿಲು ಕಂಡಿತಾದರೂ ಮತ್ತೆ ಮೋಡಗಳು ಆವರಿಸಿದಾಗ ಸೂರ್ಯದೇವ ಸಂಜೆಯವರೆಗೂ ಮರೆಯಾಗಿದ್ದ. ತೊಗರಿ ಕಣಜ ಗುಲ್ಬರ್ಗದಲ್ಲೀಗ ತೊಗರಿ ಬೆಳೆ ಹೂವಾಡುವ ಹಂತದಲ್ಲಿದೆ.
ಈ ಸಂದರ್ಭ ಅಕಾಲಿಕ ಮಳೆ ಸುರಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೆಲೆನ್ ಮಾರುತದಿಂದ ಮಳೆ ಸುರಿಯುವ ಪ್ರಮೇಯ ಬರುವುದು ಬೇಡ ಎಂದು ರೈತರು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.