ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲೆಯಲ್ಲಿ 7 ಮಂದಿ ದುರ್ಮರಣ

Mainashree
Updated On : 26 Nov 2013, 11:30 am

ಕನ್ನಡಪ್ರಭ ವಾರ್ತೆ  ಚಿಂಚೋಳಿ  ನ.25
ತಾಲೂಕಿನ ಗಡಿಭಾಗದ ಕುಂಚಾವರಂ ಠಾಣೆ ವ್ಯಾಪ್ತಿಯಲ್ಲಿ ಬರುವ ಚಿಂದಾನೂರ-ಜಿಲವರ್ಷಾ ತಾಂಡಾದ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿರುವ ಸಣ್ಣ ನೀರಾವರಿ ಕೆರೆಯಲ್ಲಿ ಸೋಮವಾರ ಬೆಳಗ್ಗೆ ಬಟ್ಟೆ ಒಗೆಯಲು ಹೋಗಿ 3 ಜನ ಬಾಲಕಿಯರು ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಚಿಂದಾನೂರ ತಾಂಡಾದ ರಾಜಶ್ರೀ ತಂದೆ ನಾರಾಯಣ (10), ಅಶ್ವಿನಿ ತಂದೆ ಹೀರಾಸಿಂಗ್ (11), ಕಲ್ಪನಾ ತಂದೆ ಹೀರಾಸಿಂಗ್ (10) ಮೃತಪಟ್ಟವರಾಗಿದ್ದು, ಮಾಯಾವತಿ ಕಿಶನ್ (7) ಅಪಾಯದಿಂದ ಪಾರಾಗಿದ್ದಾರೆ.
ಹೇಗಾಯ್ತು?:  ಸೋಮವಾರ ಕುಂಚಾವರಂ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗಬೇಕಾಗಿದ್ದ ಈ ಬಾಲಕಿಯರು ಬೆಳಗ್ಗೆ ತಾಂಡಾದ ಹತ್ತಿರದ ಸಣ್ಣ ನೀರಾವರಿ ಕೆರೆಯಲ್ಲಿ ಬಟ್ಟೆ ಒಗೆಯಲು ತೆರಳಿದ್ದರು. ಮೊದಲು ಅಶ್ವಿನಿ ನೀರಿನಲ್ಲಿ ಮುಳುಗುತ್ತಿದ್ದಾಗ ಆಕೆಯ ಸಹೋದರಿ ಕಲ್ಪನಾ ಅವಳ ರಕ್ಷಣೆಗೆ ಮುಂದಾದಳು. ಆದರೆ, ಆಕೆಗೂ ಅಲ್ಲಿ ಸಾವು ಕಾದು ಕುಳಿದಿದ್ದು ತಿಳಿಯಲೇ ಇಲ್ಲ.
ಸಾವಿನ ಆಟ ಇಲ್ಲಿಗೆ ನಿಂತಿರಲಿಲ್ಲ. ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ರಾಜಶ್ರೀ ಸಹ ಇಬ್ಬರು ಸಹೋದರಿಯರನ್ನು ನೀರು ಆಪೋಷನ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿದರು. ಆದರೆ, ಅವರ ರಕ್ಷಣೆಯ ತಂತ್ರ ಹೇಗೆಂಬ ಅರಿವಿಲ್ಲದೇ, ಭಾವೋದ್ವೇಗಕ್ಕೆ ಒಳಗಾದರು. ಪರಿಣಾಮ ರಕ್ಷಿಸುವ ಭರದಲ್ಲಿ ಆಳವಾದ ನೀರಿನಲ್ಲಿ ರಾಜಶ್ರೀ ಮುಳುಗಿದರು. ಕಲ್ಪನಾ, ರಾಜಶ್ರೀ 5ನೇ ತರಗತಿ, ಅಶ್ವಿನಿ 7ನೇ ತರಗತಿ ವಿದ್ಯಾರ್ಥಿಗಳು.
ಮೂವರು ಮುಳುಗಿದ್ದರಿಂದ ಕಂಗಾಲಾದ ಕಿಶನ್ ಚೀರಾಟ ಕಂಡು ಅಲ್ಲಲ್ಲಿ ಓಡಾಡಿಕೊಂಡಿದ್ದ ಜನರು ಕೆರೆ ಬಳಿ ಧಾವಿಸಿ ವಿಷಯ ಅರಿತರು. ಅಷ್ಟರಲ್ಲಾಗಲೇ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪ್ರತ್ಯಕ್ಷದರ್ಶಿ ಚಿಂದಾನೂರ ತಾಂಡಾದ ಸಂಜೀವಕುಮಾರ್ ಚವ್ಹಾಣ ತಿಳಿಸಿದ್ದಾರೆ.
ಬಾಲಕಿಯರ ಸಾವಿನಿಂದಾಗಿ ಇಡೀ ತಾಂಡಾದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮಕ್ಕಳನ್ನು ಕಳೆದುಕೊಂಡವರ ದುಃಖ ಮುಗಿಲುಮುಟ್ಟಿತ್ತು.
ಭೇಟಿ:  ಸ್ಥಳಕ್ಕೆ ತಹಸೀಲ್ದಾರ ಮೋಹನ ಜೋಶಿ, ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ, ಕಂದಾಯ ನಿರೀಕ್ಷಕ ಮನೋಹರ ದೇಗಲಮಡಿ, ಗ್ರಾಮಲೆಕ್ಕಿಗ ರವೀಂದ್ರ ಪಾಟೀಲ್, ಬಂಜಾರ ಸಮಾಜದ ಮುಖಂಡ ತುಕಾರಾಮ ಪವಾರ, ಮಾಣಿಕ ಜಾಧವ ಮುಂತಾದವರು ಭೇಟಿ ನೀಡಿ ಸಾಂತ್ವನ ಹೇಳಿದರು. ಚಿಂಚೋಳಿ ಪಿಎಸ್‌ಐ ಶಿವಶಂಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement