ಡಿ.12ರಂದು ಸಂಸತ್ ಎದುರು ಕಬ್ಬು ಬೆಳೆಗಾರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.25
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಲಕ್ಷಾಂತರ ದೇಶದ ಕಬ್ಬು ಬೆಳೆಗಾರರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕಮಾರ್ ನೇತೃತ್ವದಲ್ಲಿ ಬರುವ ಡಿ.12ರಂದು ಸಂಸತ್ ಭವನದ ಎದುರು ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲು ನಿರ್ಧರಿಸಿದ್ದಾರೆ.
ದೇಶಾದ್ಯಂತ ಕಳೆದ ವರ್ಷದ ಕಬ್ಬಿನ ಬಾಕಿ 6200 ಕೋಟಿ ಇದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 800 ಕೋಟಿ ಬಾಕಿ ಬರಬೇಕಾಗಿದೆ. ಇದರಿಂದ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಅವರ ಬಾಕಿ ಹಣ ಪಾವತಿಸುವಂತೆ ದೇಶದ ಕಬ್ಬು ಬೆಳೆಗಾರರು ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಕಬ್ಬು ಬೆಲೆ ನಿಗದಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕಬ್ಬು ಬೆಳೆಗಾರರ ಬಾಕಿ ಹಣ ಕಳೆದೊಂದು ವರ್ಷದಿಂದ ಪಾವತಿ ಮಾಡಿಲ್ಲ. ಕಬ್ಬು ಬೆಳೆಗಾರರ ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಡಿ.12ರಂದು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ 18 ರಾಜ್ಯಗಳಿಂದ ಲಕ್ಷಾಂತರ ಕಬ್ಬ ಬೆಳೆಗಾರರು ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂಸತ್ ಭವನದ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಯತನಾಲ್ ಉತ್ಪಾದನೆಗೆ ಕ್ರಮ ಕೈಗೊಳ್ಳಬೇಕು: ಕಬ್ಬಿನಿಂದ ಶೇ.25ರಷ್ಟು ಯತನಾಲ್ ಉತ್ಪಾದನೆ ಮತ್ತು ಬಳಕೆಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಯತನಾಲ್ ಉತ್ಪಾದನೆಯಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ನಿಗೆ 4000 ಪಡೆಯಲು ಸಾಧ್ಯವಾಗುತ್ತದೆ ಎಂದರು.
ಯತನಾಲ್ ಉತ್ಪಾದನೆಯಿಂದ ದೇಶದ ಕಬ್ಬು ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿದೆ. ದೇಶದ ವಿದೇಶಿ ವಿನಿಮಯ 2 ಲಕ್ಷ ಕೋಟಿ ಉಳಿತಾಯವಾಗಲು ಸಹಕಾರಿ ಆಗುತ್ತದೆ ಎಂಬುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
2500 ದರ ನಿಗದಿಗೆ ವಿರೋಧ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರತಿ ಟನ್ ಕಬ್ಬಿಗೆ 2500 ದರ ನಿಗದಿ ಮಾಡಿರುವ ಕ್ರಮ ಖಂಡಿಸಿರುವ ಕುರುಬೂರು ಶಾಂತಕುಮಾರ್ ಅವರು, ಕೂಡಲೇ ರಾಜ್ಯ ಸರ್ಕಾರ ಇದನ್ನು ಪರಿಶೀಲಿಸಿ 2800 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆದ ರೈತರು ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು ಮುಕ್ತ ಅವಕಾಶ ನೀಡಲು ಆದೇಶಿಸಬೇಕು. ಗುಲ್ಬರ್ಗ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕೇವಲ 1800 ಪ್ರತಿ ಟನ್ ಕಬ್ಬಿಗೆ ನೀಡುವುದಾಗಿ ರೈತರಿಂದ ಕಾನೂನುಬಾಹಿರವಾಗಿ ಬಿಳಿ ಹಾಳೆ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದ್ದು, ಕೂಡಲೇ ಸರ್ಕಾರ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಕಾರ್ಖಾನೆಗಳ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿಕೊಡಬಾರದು ಎಂದು ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಇನ್ನು ಹಲವಾರು ಗ್ರಾಮಗಳಲ್ಲಿ ರೈತರಿಗೆ ಅರಿವು ಮೂಡಿಸಲಾಗುವುದು ಎಂದರು.
ಕೂಡಲೇ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಪ್ರಕ್ರಿಯೆ ಆರಂಭಿಸಬೇಕು. ಕಬ್ಬು ಕಟಾವು ಆದ 15 ದಿನದೊಳಗಾಗಿ ಕಬ್ಬು ಬೆಳೆಗಾರರಿಗೆ ಹಣ ನೀಡಬೇಕು. ಕಬ್ಬು ಖರೀದಿ ಮತ್ತು ಸರಬರಾಜು ವಿಧೇಯಕ 2013 ರಲ್ಲಿ ಜಾರಿಗೊಂಡಿದೆ. ಒಂದು ವೇಳೆ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಆದ ಬಳಿಕೆ 15 ದಿನದೊಳಗಾಗಿ ಹಣ ಪಾವತಿ ಮಾಡದಿದ್ದರೆ ಶೇ.15 ರಷ್ಟು ಬಡ್ಡಿ ಸಹಿತ ಹಣ ಪಾವತಿ ಮಾಡಬೇಕಾಗುತ್ತದೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ ಪಾಟೀಲ್, ಶಾಂತವೀರ ಪಾಟೀಲ್, ಬಸವಂತರಾಯ ಏರಿ, ಶಿವಲಿಂಗಪ್ಪ ಚೋರಗಸ್ತಿ, ನಾಗೇಂದ್ರರಾವ್ ದೇಶಮುಖ ಮಂಗಲಗಿ, ಸುರೇಶ ಮಂಠಾಳೆ, ನರಹರಿ ಪಾಟೀಲ್, ಬಸವರಾಜ ಪವಾಡಶೆಟ್ಟಿ, ಮಹಾದೇವಪ್ಪ ಪರಗೊಂಡ ಜೇವರ್ಗಿ ಇತರರು ಉಪಸ್ಥಿತರಿದ್ದರು.