'ಸೇವಾದಳ ಸ್ಥಾಪಕ ಹರ್ಡೀಕರ್ ಉದ್ದೇಶ ಸಫಲವಾಗಲಿ'
ಆಳಂದ: ಶಿಸ್ತು, ಸಮಯಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಉದ್ದೇಶದಿಂದ ನಾಸು ಹರ್ಡೀಕರ್ ಅವರು ಸ್ಥಾಪಿಸಿದ ಭಾರತ ಸೇವಾದಳ ಉದ್ದೇಶವನ್ನು ಈಡೇರಿಸಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯ ವಿಕಾಸ ಸೌಧದಲ್ಲಿ ಭಾರತ ಸೇವಾದಳ ಏರ್ಪಡಿಸಿದ್ದ ಶಿಕ್ಷಕರ ಮಿಲಾಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾದಳ ತನ್ನದೆ ಆದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸಿದ್ದರೂ ರಾಷ್ಟ್ರೀಯ ವಿಷಯ, ಆರೋಗ್ಯ, ವೈಚಾರಿಕ, ಬದ್ಧತೆಯೊಂದಿಗೆ ದೊಡ್ಡ ಅರ್ಥದಿಂದ ಮುನ್ನೆಡೆಯುತ್ತಿದೆ. ಎಲ್ಲರಲ್ಲಿ ರಾಷ್ಟ್ರೀಯತೆ, ಪ್ರೇಮ ನಶಿಸುತ್ತಿದೆ, ದೇಶದ ಕಡೆ ಗಮನವಿಲ್ಲ. ಊರು, ಜನ, ತಂದೆ- ತಾಯಿ ಭಾವನಾತ್ಮಕತೆ ಕೊರಗುತ್ತಿರುವ ಹೊತ್ತಿನಲ್ಲಿ ವಿಶ್ವಭಾತ್ರುತ್ವದ ಚಿಂತನೆ ಅಗತ್ಯವಾಗಿದೆ ಎಂದರು.ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರ ಧ್ವಜಾರೋಹಣ ಏರಿಸುವಾಗ ಗೀತೆ ಆರಂಭವಾಗಿ ಮುಗಿಯುವ ತನಕವೂ ಆ ವ್ಯಕ್ತಿಯೂ ಧ್ವಜದ ದಾರ ಕಟ್ಟುವುದು ಮುಗಿದಿರುವುದಿಲ್ಲ. ಇದು ರಾಷ್ಟ್ರಧ್ವಜಕ್ಕೆ ಅವಮಾನಕರ ಸಂಗತಿಯಾಗಿದೆ. ರಾಷ್ಟ್ರಗೀತೆ ಆರಂಭದಲ್ಲೇ ಧ್ವಜದ ದಾರಕಟ್ಟುವುದು ಮುಗಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ತಂತ್ರಜ್ಞಾನ ಬಳಸಿ ಧ್ವಜಾರೋಹಣ ನೆರವೇರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.