ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

6 ತಿಂಗ್ಳಾದ್ರೂ 'ಆಶ್ರಯ'ವಿಲ್ಲ!

Lingaraj Badiger
Updated On : 28 Nov 2013, 11:45 am

ಆಳಂದ: ಪುರಸಭೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿನ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಹಂಚಲು ಆಶ್ರಯ ನಗರ ನಿವೇಶನ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಈ ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ಪುರಸಭೆಯಲ್ಲಿ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ವಾಜಪೇಯಿ ನಗರ ನಿವೇಶನ ಯೋಜನೆ ಜಾರಿಗೊಳಿಸುವಂತೆ ಸರ್ಕಾರವು 2010, ಏ.13ರಲ್ಲೇ ಆದೇಶಿಸಿದೆ. ಗುರಿ ಸಾಧಿಸದೆ ಇರುವ ಕಡೆ ಗುರಿ ಸಾಧಿಸುವಂತೆ ಸದಾ ಆದೇಶಿಸುತ್ತಲೆ ಬಂದ ಹಿನ್ನೆಲೆಯಲ್ಲಿ 2913, ಜೂ.20ರಂದು ಈ ಯೋಜನೆ ಅನುಷ್ಠಾನಗೊಳಿಸುವಂತೆ ಮತ್ತೆ ಪುರಸಭೆಗಳಿಗೆ ಆದೇಶಿಸಿ ಆರು ತಿಂಗಳಾದರು ಪ್ರಕ್ರಿಯೆ ನಡೆಯುವ ಕುರಿತು ಸುಳಿವೆ ಇಲ್ಲದಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಜಮೀನು ಲಭ್ಯವಿದ್ದರೆ ನಿವೇಶನ ಹಂಚಿಕೆಯಾಗಬೇಕು. ಒಂದು ವೇಳೆ ಜಮೀನು ಕೊರತೆಯಿದ್ದರೆ ಸರ್ಕಾರದಿಂದ ಖರೀದಿಸಲು ಜಿಲ್ಲಾಧಿಕಾರಿಗಳು ಅಧ್ಯಕ್ಷರಿರುವ ಸಮಿತಿಗೆ ಅವಕಾಶವಿದೆ. ಈ ಅವಕಾಶವಿದ್ದಾಗಲೂ ಜಮೀನು ಖರೀದಿ ಮಾಡಿಕೊಂಡು ಬಡವರಿಗೆ ವಸತಿ ಕಲ್ಪಿಸುವ ಕೆಲಸದ ಆರಂಭಿಕ ಪ್ರಕ್ರಿಯೆ ಕೂಡ ಕೈತ್ತಿಕೊಳ್ಳದೆ ಇರುವುದು ಆಡಳಿತ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಭೂಮಿ ಖರೀದಿಗೆ ಅವಕಾಶ: ಇತ್ತೀಚಿನ ದಿನಗಳಲ್ಲಿ ಯಾವುದೇ ಕಟ್ಟಡ ಕಾರ್ಯಗಳಿಗೆ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಭೂಮಿ ಲಭ್ಯವಾಗುತ್ತಿಲ್ಲವಾದ್ದರಿಂದ ಮತ್ತು ಜಮೀನು ಖರೀದಿ ದರದಲ್ಲಿ ವಿಪರೀತ ಹೆಚ್ಚಳದಿಂದಾಗಿ ಭಾರಿ ಬೆಲೆಯಲ್ಲಿ ಗರಿಷ್ಠ ಮೂರು ಪಟ್ಟು ಹೆಚ್ಚಿನ ಮಿತಿಯವರೆಗೆ ಜಮೀನು ಖರೀದಿಸಲು ಅನುಮೋದನೆ ನೀಡಿ ಅವಶ್ಯಕತೆ ಇರುವ ಹೆಚ್ಚಿನ ಮೊತ್ತ ಫಲಾನುಭವಿಗಳ ವಂತಿಕೆಯೊಂದಿಗೆ ಜಾರಿಯಲ್ಲಿರುವ ಆಶ್ರಯ ನಗರ ನಿವೇಶನಗಳ ಯೋಜನೆಯನ್ನು ಮಾರ್ಪಡಿಸಿ 2010-11ನೇ ಸಾಲಿನಿಂದ ವಾಜಪೇಯಿ ನಗರ ನಿವೇಶನಗಳ ಯೋಜನೆ ಎಂಬ ನೂತನ ಹೆಸರಿನೊಂದಿಗೆ ಜಾರಿಗೊಂಡಿದೆ.
ಸರ್ಕಾರವು ಪ್ರಸಕ್ತ 2013-2014ನೇ ಸಾಲಿನಲ್ಲಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆ ಕೆಳಗಿರುವ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ನಿಗಮದಿಂದ ಕನಿಷ್ಠ ಗುರಿಯನ್ನು ನಿಗದಿಪಡಿಸಲಾಗಿದ್ದು, ನಿವೇಶನ ರಹಿತರಿಗೆ ಲಭ್ಯತೆಗೆ ಅನುಗುಣವಾಗಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಇಡೀ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಮತ್ತು ಅವುಗಳಿಗೆ ನಿಗದಿಪಡಿಸಿದ ನಿವೇಶನ ಹಂಚಿಕೆಯ ಗುರಿ ಹೊಂದಲಾಗಿದೆ. ಪಟ್ಟಣ ಪಂಚಾಯತ್ 150, ಪುರಸಭೆಗೆ 250, ನಗರಸಭೆ 600, ಮಹಾನಗರ ಪಾಲಿಕೆ 12000 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2000 ನಿವೇಶನ ಗುರಿ ಸರ್ಕಾರ ನಿಗದಿಪಡಿಸಿದೆ.
634 ಪ್ಲಾಟ್ ನೆನೆಗುದ್ದಿಗೆ: 2005-06ರಲ್ಲಿ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಪಟ್ಟಣದ ವಿವಿಧ ಜಾತಿಯ ಬಡವರಿಗೆ ವಿತರಿಸುವುದಕ್ಕಾಗಿ ರೂಪಿಸಿದ ನಿವೇಶನ ವಿತರಣಾ ಯೋಜನೆಯ ನೆನೆಗುದ್ದಿಗೆ ಬಿದ್ದಿದೆ. ಆಳಂದ ಶರಣನಗರ ಹೊರವಲಯದ ಸಮೀಪಿದಲ್ಲಿನ ಡಾ. ಬಿ.ಜಿ. ಜವಳಿ ಅವರ 750 ಸರ್ವೇ ನಂಬರ್‌ನ 15 ಎಕರೆ ಜಮೀನನ್ನು 2005-06ರಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಸರ್ಕಾರ ಖರೀದಿಸಿ ನಂತರ 21 ಫೆಬ್ರವರಿ 2012ರಲ್ಲಿ ಆ ಜಮೀನು ಪುರಸಭೆ ಮುಖ್ಯಾಧಿಕಾರಿಗಳ ಹೆಸರಿಗೆ ವರ್ಗಾಯಿಸಲು 6 ವರ್ಷ ವಿಳಂಬವಾಗಿ ಯೋಜನೆ ನೆನೆಗುದ್ದಿಗೆ ಬಿದ್ದಿದೆ.
ಯೋಜನೆಗೆ 15 ಎಕರೆ ಪ್ರದೇಶದಲ್ಲಿ ಜಮೀನಿನ 265 ಫಲಾನುಭವಿಗಳನ್ನು ಆಯ್ಕೆ ಮಾಡಿ 20್ಗ30 ಅಳತೆಯ ಪ್ಲಾಟ್‌ಗಳ ವಿತರಣೆಗೆ ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದರು. ಮತ್ತೆ ನಿವೇಶನದ ವಿಸ್ತಾರ ಮನಗಂಡು ಒಟ್ಟು 634 ನಿವೇಶನ ಕ್ರಿಯಾಯೋಜನೆ ರೂಪಿಸಿದ್ದರು.
ಇದರಲ್ಲಿ ನೇಕಾರರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗದ ಬಡವರಿಗೆ ಪ್ಲಾಟ್ ನೀಡುವುದಕ್ಕಾಗಿ ಅಂದು ಅರ್ಜಿ ಕರೆದಾಗ 1250 ಅರ್ಜಿಗಳು ಸಲ್ಲಿಕೆ ಪೈಕಿ 2007, ಆ.21ರಂದು 634 ಪ್ಲಾಟ್‌ಗಳ ಪೈಕಿ 265 ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ 369 ಬಾಕಿ ಉಳಿಸಲಾಗಿತ್ತು.
ಹಿಂದಿನ ಸಭೆಗಳಲ್ಲಿ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ವಾಸ್ತವದಲ್ಲಿ ಫಲಾನುಭವಿಗಳ ಅಯ್ಕೆಪಟ್ಟಿಗೆ ಯಾವುದೇ ಅನುಮತಿ ನೀಡಿಲ್ಲ ಎಂದು ನಿಗಮವೇ ಸ್ಪಷ್ಟಪಡಿಸಿದೆ. ಹೀಗೆ ಮತ್ತೆ ತಳಮಟ್ಟದಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಶುರುಮಾಡುವ ಸನ್ನಿವೇಶ ಬಂದೊದಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement