ಅಧ್ಯಕ್ಷರಾಗಿ ಸಣ್ಣ ದೇಸಾಯಿ ಆಯ್ಕೆ
ಸುರಪುರ:ತಾಲೂಕಿನ ದೇವರಗೋನಾಲ ಗ್ರಾಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸಣ್ಣ ದೇಸಾಯಿ ಶಿವಮೂರ್ತೆಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಬೆಳಗ್ಗೆ 10 ಗಂಟೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸಣ್ಣ ದೇಸಾಯಿ ಮತ್ತು ದ್ಯಾವಮ್ಮ ಪಿಡ್ಡಪ್ಪ ನಾಮಪತ್ರ ಸಲ್ಲಿಸಿದ್ದರು. ನಂತರ ದ್ಯಾವಮ್ಮ ತಮ್ಮ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಸಣ್ಣ ದೇಸಾಯಿ ಅವರ ಆಯ್ಕೆಯನ್ನು ಪ್ರಕಟಿಸಿದರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಗ್ರಾಪಂ ಆವರಣದಲ್ಲಿ ಜರುಗಿದ ವಿಜಯೋತ್ಸವದಲ್ಲಿ ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕಿ, ಪರಸ್ಪರ ಬಣ್ಣ ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ದೇವರಗೋನಾಲ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಪ್ರಮುಖರಾದ ದೊಡ್ಡ ದೇಸಾಯಿ, ಬಸವರಾಜ ದೇಸಾಯಿ, ವೆಂಕೋಬ ದೇಸಾಯಿ, ದ್ಯಾವಣ್ಣ ಕಟ್ಟಿಮನಿ, ಹಣಮಂತ್ರಾಯ ದಿವಳಗುಡ್ಡ, ಶಿವನಗೌಡ ಮಾಲಿ ಪಾಟೀಲ್, ಮಲ್ಲಯ್ಯ ದಿವಳಗುಡ್ಡ, ಭೀಮಣ್ಣ ಬೈರಿಮಡ್ಡಿ, ಮಲ್ಲೇಶಿ ಪೂಜಾರಿ, ನಾರಾಯಣ ಬೈರಿಮಡ್ಡಿ ಗ್ರಾಪಂ ಸದಸ್ಯರಾದ ಮಾನಪ್ಪ ಶಹಪುರಕರ್, ಸಾಯಿಬಣ್ಣ ಕಟ್ಟಿಮನಿ, ದ್ಯಾವಪ್ಪ ಸಿದ್ದಾಪುರ, ಲಕ್ಷ್ಮಣ ಮಾಚಗುಂಡಾಳ, ಲಕ್ಷ್ಮಣ, ಶರಣಪ್ಪ ಸಿದ್ದಾಪುರ ಇನ್ನಿತರರಿದ್ದರು.