ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಫಜಲ್ಪುರ ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ರಸ್ತೆ ತಡೆ

Lingaraj Badiger
Updated On : 28 Nov 2013, 11:45 am

ಅಫಜಲ್ಪುರ: ತಾಲೂಕನ್ನು ಕೂಡಲೇ ಬರಗಾಲ ಪೀಡಿತ ತಾಲೂಕೆಂದು ಘೋಷಣೆ ಮಾಡಲು ಆಗ್ರಹಿಸಿ ರೈತರು ಪಟ್ಟಣದಲ್ಲಿ ಬುಧವಾರ ರಸ್ತೆತಡೆ ಚಳವಳಿ ನಡೆಸಿದರು.
ರಾಜ್ಯದ ಗಡಿ ತಾಲೂಕು ಅಫಜಲ್ಪುರ ಈ ವರ್ಷ ಕಡಿಮೆ ಮಳೆ ಆಗಿರುವುದರಿಂದ ಹಾಗೂ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಬರದ ಛಾಯೆ ಆವರಿಸಿದ್ದು, ರೈತರಲ್ಲಿ ಆತಂಕ ಮೂಡಿದೆ. ಈ ಕುರಿತು ಅನೇಕ ಬಾರಿ ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಮೋಜು ಮಾಡುತ್ತ ರೈತನ ಹೊಟ್ಟೆ ಮೇಲೆ ತಣ್ಣೀರು ಎರಚುತ್ತಿದೆ ಎಂದು ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜಕುಮಾರ್ ಬಡದಾಳ ಆರೋಪಿಸಿದರು.
ಆಗ್ರಹ: ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಫಜಲ್ಪುರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು, ತೊಗರಿಗೆ ಕ್ವಿಂ.ಗೆ 6 ಸಾವಿರ ಬೆಲೆ ನಿಗದಿಪಡಿಸಬೇಕು, ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರ ಮಾದರಿಯಲ್ಲಿ ಸಣ್ಣ ರೈತರಿಗೂ ಪರಿಹಾರ ನೀಡಬೇಕು, ಭೀಮಾ ನದಿಯಲ್ಲಿ ಅಕ್ರಮ ಮರಳು ದಂಧೆ ನಿಲ್ಲಿಸಬೇಕು, ತಾಲೂಕು ಬಸ್ ಘಟಕಕ್ಕೆ ಉತ್ತಮ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಸರ್ಕಾರದ ಮಲತಾಯಿ ಧೋರಣೆ: ಜೈಕರವೇ ತಾಲೂಕು ಉಪಾಧ್ಯಕ್ಷ ಮಹಾಂತೇಶ ಗುಣಾರಿ ಮಾತನಾಡಿ, ಪಕ್ಕದ ಜೇವರ್ಗಿಯಲ್ಲಿ ಉತ್ತಮ ಮಳೆಯಾಗಿದ್ದರೂ ಅದನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದು ನಿಜಕ್ಕೂ ಅಚ್ಚರಿ ಸಂಗತಿ. ಸರ್ಕಾರ ಜೇವರ್ಗಿ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಿ ಪಕ್ಕದ ಅಫಜಲ್ಪುರ ಘೋಷಣೆ ಮಾಡದೇ ಮಲತಾಯಿ ಧೋರಣೆ ತಾಳಿದೆ ಎಂದು ಆರೋಪಿಸಿದರು.
ತಾಲೂಕಿನ ಜನಪ್ರತಿನಿಧಿಗಳು ಈ ಕುರಿತು ದ್ವನಿ ಎತ್ತದೇ ಇರುವುದು ನಿಜಕ್ಕೂ ವಿಷಾದನೀಯ. ಹೀಗಾಗಿ ಶಾಸಕರಿಗೆ ತಾಲೂಕಿನ ಜನತೆಯ ಬಗ್ಗೆ ಕಿಂಚಿತ್ತಾದರೂ ಚಿಂತೆಯಿದ್ದರೆ ಕೂಡಲೇ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಹೇಳಿದರು.
ಕೋಲಿ ಸಮಾಜದ ತಾಲೂಕು ಉಪಾಧ್ಯಕ್ಷ ಶಂಕು ಮ್ಯಾಕೇರಿ, ಸುನೀಲ್ ಹೊಸ್ಮನಿ, ಗೌರಿಶಂಕರ ಹೆಗ್ಗಿ ಮಾತನಾಡಿದರು. ಶಿವಾನಂದ ಕಾಮಗೊಂಡ, ಬಾಬು ಕಲ್ಲೂರ್, ರಿಯಾಜ್ ಬಿಲ್ವಾಡ್,  ಸಾತು ಪಾಟೀಲ್ ಹಾಗೂ ಚಂದ್ರು ಗಾಡಿ ವಡ್ಡರ್, ವಿವಿಧ ಗ್ರಾಮದ ರೈತರು ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement