ಎಂಇಎಸ್ ಶಾಸಕರ ಪ್ರತಿಕೃತಿ ದಹನ
ಗುಲ್ಬರ್ಗ/ಚಿಂಚೋಳಿ: ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ ಶಾಸಕ ಸಂಭಾಜಿ ಪಾಟೀಲ್ ಹೇಳಿಕೆ ಖಂಡಿಸಿ ನಗರದಲ್ಲಿ ಜೈಕರವೇ, ಚಿಂಚೋಳಿ ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಸಂಭಾಜಿ ಪ್ರತಿಕೃತಿ ದಹನ ಮಾಡಿದರು.
ಶಾಸಕ ಸಂಭಾಜಿಯನ್ನು ಕೂಡಲೇ ಗಡಿಪಾರು ಮಾಡಬೇಕು, ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು, ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಜೈಕರವೇ ರಾಜ್ಯಾಧ್ಯಕ್ಷ ಅರಣಕುಮಾರ್ ಪಾಟೀಲ್ ಒತ್ತಾಯಿಸಿದರು.
ರಾಜ್ಯ ವಿಧಾನಸಭೆಯ ಸ್ವೀಕರ್ ಅವರು ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜೈಕರವೇ ಸಂಘಟನೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಸಚೀನ್ ಫರಹತಾಬಾದ್, ಚನ್ನು ಮರಬ, ಶರಣಗೌಡ ಸಂಕನೂರ, ಬಿ.ಜಯಸಿಂಗ್, ಶ್ರೀಕಾಂತ ಆಲೂರ್, ಅಸ್ಫಾಕ ಬಂದರವಾಡ, ಶಿವಾನಂದ, ಚನ್ನು ಪಾಟೀಲ್, ಶಿವು ಹಾಗರಗಾ, ಶರೀಫ್ ಕಾಳೆ, ಸಂದೇಶ ಪವಾರ, ಸತೀಶ ಫರಹತಾಬಾದ್, ಬಂಟಿ ಕಂಬೆನೂರ್, ಬಾಬುರಾವ ಚಿಂಚನಸೂರ್, ಬಾಲರಾಜ, ಭೀಮರಾವ, ರಹೀಂ ಇತರರು ಇದ್ದರು.
ಚಿಂಚೋಳಿಯಲ್ಲಿ..: ಪಟ್ಟಣದ ಚಂದಾಪುರ ನಗರದ ಭಕ್ತ ಕನಕದಾಸರ ಚೌಕಿನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಎಂಇಎಸ್‌ನ ಸಂಘಟನೆಯ ಶಾಸಕರು ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ ಕನ್ನಡಾಂಬೆಗೆ ಅಪಮಾನ ಮಾಡಿದ್ದಾರೆ ಎಂದರು.
ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕಾಧ್ಯಕ್ಷ ಸಂಜೀವಕುಮಾರ್ ಪಾಟೀಲ್, ಕಾರ್ಯದರ್ಶಿ ರೇವಣಸಿದ್ದ ಪೂಜಾರಿ, ಮತೀನ್ ಸೌದಾಗರ, ಸಂಜು ಪೂಜಾರಿ, ಸುಂದರ ಸಾಗರ, ಎಂ.ಡಿ ಮತೀನ್ ಪಟೇಲ್, ಗಾಂಧೀಜಿ ಪಾಟೀಲ್, ಚಿತ್ರಶೇಖರ ದಾಸ, ಭೀಮಾಶಂಕರ ಕಟ್ಟಿ, ತುಳಜಪ್ಪ ಜುಂಟಪಳ್ಳಿ ಇತರರು ಭಾಗವಹಿಸಿದ್ದರು.