ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುರಸಭೆಯಲ್ಲಿ ಅವ್ಯವಹಾರ: ಪ್ರತಿಭಟನೆ

Lingaraj Badiger
Updated On : 28 Nov 2013, 11:50 am

ಸುರಪುರ: ಇಲ್ಲಿಯ ಪುರಸಭೆಯಲ್ಲಿ ಪ್ರತಿಯೋಜನೆಗಳಲ್ಲಿ ಬಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಸಾರ್ವಜನಿಕರ ದೂರು ದುಮ್ಮಾನಗಳಿಗೆ ಸ್ಪಂದಿಸುತ್ತಿಲ್ಲ. ಕಾರ್ಯಾಲಯದ ಸಿಬ್ಬಂದಿ ಸಾರ್ವಜನಿಕರೊಂದಿಗೆ ದುರ್ನಡತೆಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ನಿರ್ಲಕ್ಷ್ಯ: ಪುರಸಭೆಯಲ್ಲಿ ಸಾರ್ವಜನಿಕರು ಕುಂದು-ಕೊರತೆಯ ಬಗ್ಗೆ ಮನವಿ ಸಲ್ಲಿಸಿದರೂ ಕೂಡಾ ಕ್ಯಾರೆ ಅನ್ನುವವರು ಇಲ್ಲದಂತಾಗಿದೆ. ನಾಗರಿಕರ ಮೂಲಸೌಕರ್ಯಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಜೈಕರವೇ ಮೂಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಾಲಯದ ಸಿಬ್ಬಂದಿ ನಾಗರಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಜನರು ಯಾವುದೇ ಸಣ್ಣ ಕೆಲಸದ ಬಗ್ಗೆ ವಿಚಾರಿಸಿದರೆ, ಸೌಜನ್ಯದಿಂದ ವರ್ತಿಸುವುದು ಅವರಿಗೆ ಗೊತ್ತಿಲ್ಲ. ಏನಾದರೂ ಕೇಳಿದರೆ 500-1000 ರು. ಅವರಿಗೆ ನೀಡಲೇಬೇಕು. ಇಲ್ಲವಾದರೆ ಸಾರ್ವಜನಿಕರ ಯಾವುದೇ ಕೆಲಸಗಳು ಆಗುವುದಿಲ್ಲ ಎಂದು ದೂರಿದರು.
ನಿವೇಶನ ಮತ್ತು ಆಸ್ತಿ ವರ್ಗಾವಣೆಗಾಗಿ ಅರ್ಜಿ ಕೊಟ್ಟರೆ ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಕೊಡದಿದ್ದರೆ ಅರ್ಜಿಯನ್ನು ಬುಟ್ಟಿಗೆ ಎಸೆಯುತ್ತಾರೆ. ಹಣ ಕೊಟ್ಟು ಮೂರು ತಿಂಗಳಾದರೂ ಕೆಲಸವಾಗಿರುವುದಿಲ್ಲ. ದಿನಾಲೂ ಪುರಸಭೆ ಸುತ್ತಿ ಜನ ಬೇಸತ್ತು ಹೋಗಿದ್ದಾರೆ. ಮೇಲಾಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ನಾವೇನು ಮಾಡಬೇಕು ಎಂದು ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಪರದಾಟ: ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಗಳ ಕಟ್ಟಿದ್ದರೂ ಚೆಕ್ ಪಡೆಯಲು ಸಾಕಷ್ಟು ಹಣ ನೀಡಬೇಕು. ಹಣ ಕೊಡದಿದ್ದರೆ ನೀವು ಮನೆಯನ್ನು ಸರಿಯಾಗಿ ಕಟ್ಟಿರುವುದಿಲ್ಲ ಎಂದು ಉತ್ತರಿಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಪ್ರತಿ ವಾರ್ಡ್‌ಗಳಲ್ಲಿರುವ ಕಂಬಕ್ಕೆ ಬೀದಿ ದೀಪಗಳಿಲ್ಲ. ಮಹಿಳಾ ಶೌಚಾಲಯ ಮತ್ತು ಮೂತ್ರಾಲಗಳಿಲ್ಲದೆ ಸಾರ್ವಜನಿಕರ ಪರದಾಡುತ್ತಿದ್ದಾರೆ. ಸರಕಾರದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಕಿಡಿಕಾರಿದರು. ಮನವಿ ಪತ್ರವನ್ನು ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಮತ್ತು ಮುಖ್ಯಾಧಿಕಾರಿ ಏಜಾಜ್ ಹುಸೇನ್ ಅವರಿಗೆ ಸಲ್ಲಿಸಲಾಯಿತು. ಜೈಕರವೇ ತಾಲೂಕು ಘಟಕದ ಅಧ್ಯಕ್ಷ ಶಿವುಮೋನಯ್ಯ ನಾಯಕ, ಉಪಾಧ್ಯಕ್ಷ ವೆಂಕಟೇಶ ಚಟ್ನಳ್ಳಿ, ನಗರ ಘಟಕದ ಅಧ್ಯಕ್ಷ ಭೀಮು ನಾಯಕ ಮಲ್ಲಿಬಾವಿ, ವೆಂಕಟೇಶ ದೊಡ್ಡಮನಿ, ಬೀರಲಿಂಗ ಮಲ್ಕಾಪುರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement