ಬೇಡಿಕೆ ಈಡೇರಿಕೆಗಾಗಿ ಡಿಎಸ್‌ಎಸ್ ಧರಣಿ
ಶಹಾಪುರ: ತಾಲೂಕಿನ ಕೊಂಕಲ್ ಗ್ರಾಮದ ವ್ಯಾಪ್ತಿಯಲ್ಲಿ ಕಾಲುವೆ ಒಡೆದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ತಾಲೂಕಿನ ಭೀಮರಾಯನ ಗುಡಿ ಕಾಡಾ ಕಚೇರಿ ಎದುರು ತಾಲೂಕು ಡಿಎಸ್‌ಎಸ್ ವತಿಯಿಂದ ಧರಣಿ ನಡೆಸಲಾಯಿತು.
ಕರ್ತವ್ಯ ಲೋಪ: ಈ ಸಂದರ್ಭದಲ್ಲಿ ಮಾತನಾಡಿದ ಭೀಮರಾಯ ಸೈದಾಪುರ, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಪ್ರತಿಯೊಂದು ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತದೆ. ಕಾಲುವೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿರುವುದು ಕಂಡು ಕೂಡ ಅಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಬಾಕಿ ಇರುವ ವಿದ್ಯುತ್ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಮುಗಿಸಿ ರೈತರ ಜಮೀನುಗಳಿಗೆ ನೀರು ಹರಿಯುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಪರಿವೀಕ್ಷಣೆ ನೆಪ: ಅಲ್ಲದೆ ಅಂದಾಜು ಪತ್ರಿಕೆ ತಯಾರಿಸುವ ಮತ್ತು ಅಳತೆ ಪುಸ್ತಕ ನಮೂದಿಸಲು ಬಾರದ ಸಹಾಯಕ ಎಂಜಿನೀಯರ್‌ಗಳನ್ನು ತೆಗೆದು, ಸದರಿ ಹುದ್ದೆಗೆ ಕಾಯಂ ಎಂಜಿನಿಯರ್‌ರನ್ನು ನೇಮಿಸಬೇಕು. 9ತಿಂಗಳಿಂದ ಮೂರನೇ ವ್ಯಕ್ತಿ ಪರಿವೀಕ್ಷಣೆ ನೆಪದಲ್ಲಿ ತಡೆ ಹಿಡಿದಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಬಾಕಿ ಹಣಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ನಂತರ ನಾನಾ ಬೇಡಿಕೆಯುಳ್ಳ ಮನವಿ ಪತ್ರವನ್ನು ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಭಾಗ್ಯ ಜಲ ನಿಗಮ ಇವರಿಗೆ ಅರ್ಪಿಸಲಾಯಿತು.
--
ಹೆಣ್ಣು ಶಿಶು ಪತ್ತೆ
ಗುಲ್ಬರ್ಗ: ನಗರದ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು ಹತ್ತಿರ ಸೆ.21ರಂದು ಒಂದು ದಿನದ ಹೆಣ್ಣು ಮಗುವೊಂದು ಸಿಕ್ಕಿದ್ದು, ಅಂದೆ ಆ ಮಗುವನ್ನು ನಗರದ ಆಳಂದ ರಸ್ತೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ.
ಈ ಮಗುವು ಉತ್ತಮ ಆರೋಗ್ಯ ಹೊಂದಿದ್ದು ಗೋಧಿ ಮೈಬಣ್ಣ ಉಳ್ಳದ್ದಾಗಿದೆ. ಈ ಮಗುವಿನ ಪಾಲಕರು, ಪೋಷಕರು ಯಾರಾದರೂ ಇದ್ದಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಮೇಲೆ ತಿಳಿಸಿದ ಕಾರ್ಯಾಲಯಕ್ಕೆ 60 ದಿನದೊಳಗೆ ಭೇಟಿ ಮಾಡಿ, ಮಗು ಪಡೆದುಕೊಂಡು ಹೋಗಲು ಕೋರಲಾಗಿದೆ. ವಾರಸುದಾರರು ಬಾರದೇ ಇದ್ದಲ್ಲಿ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅಮೂಲ್ಯ ಶಿಶುಗೃಹದ ಅಧೀಕ್ಷಕರು ತಿಳಿಸಿದ್ದಾರೆ.