ಸಗರದಲ್ಲಿ ಚರಂಡಿ ನಿರ್ಮಾಣಕ್ಕೆ ಆಗ್ರಹ
ಶಹಾಪುರ: ತಾಲೂಕಿನ ಸಗರ ಗ್ರಾಮದ ಹೋಳಿಕಟ್ಟೆ ರಸ್ತೆಯಲ್ಲಿ ದಿನಪ್ರತಿ ಚರಂಡಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಪಟ್ಟಣಕ್ಕೆ ಆಗಮಿಸಲು ಈ ರಸ್ತೆ ಸಾಕಷ್ಟು ಅನುಕೂಲವಾಗಿದ್ದೂ, ಭೀಮರಾಯನ ಗುಡಿಗೆ ಬಂದು ತಲುಪುತ್ತದೆ. ಗ್ರಾಮ ದಾಟುವವರೆಗೆ ಈ ರಸ್ತೆ ಮೇಲೆ ಚರಂಡಿ ನೀರು ಅಲ್ಲದೆ ಜಾನುವಾರುಗಳ ಸಗಣಿ ಬೆರೆತು ಗಬ್ಬು ವಾಸನೆ ಬೀರುತ್ತಿದೆ. ಇದರಿಂದಾಗಿ ನಾಗರಿಕರು ಮತ್ತು ಬೈಕ್ ಸವಾರರ ಸಂಚಾರಕ್ಕೆ ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಸ್ಪತ್ರೆಗೆ ಅಲೆದಾಟ: ಗ್ರಾಮದ ಸಾಕಷ್ಟು ಜನರು ಇದೇ ರಸ್ತೆಯಿಂದಲೇ ಓಡಾಡುತ್ತಾರೆ. ಶಾಲಾ ಮಕ್ಕಳು ವೃದ್ಧರು ಈ ರಸ್ತೆಯಲ್ಲಿಯೇ ಸಾಗುವುದು ಸಾಮಾನ್ಯ. ಸುತ್ತಮುತ್ತಲೂ ವಾಸಿಸುವ ನೂರಾರು ಕುಟುಂಬಗಳು ನಿತ್ಯ ದುರ್ನಾತದುಂದ ಆರೋಗ್ಯ ಹದಗೆಡುತ್ತಿದೆ. ಒಂದಿಲ್ಲೊಂದು ಕಾರಣಕ್ಕೆ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸೂಕ್ತ ಚರಂಡಿ ನಿರ್ಮಾಣದ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶಗೌಡ ಸುಬೇದಾರ ಆಗ್ರಹಿಸಿದ್ದಾರೆ.