ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಖ್ಯಮಂತ್ರಿಗಳೇ, ರಾಜಿನಾಮೆ ನೀಡಿ

Lingaraj Badiger
Updated On : 29 Nov 2013, 10:43 am

ಕ.ಪ್ರ.ವಾರ್ತೆ  ಗುಲ್ಬರ್ಗ  ನ.28
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕಬ್ಬು ಬೆಳೆಗಾರ ವಿಠ್ಠಲ್ ಅರಬಾವಿ ಆತ್ಮಹತ್ಯೆ ಪ್ರಕರಣ ಖಂಡಿಸಿ ಗುಲ್ಬರ್ಗ ನಗರ ಹಾಗೂ ಚಿಂಚೋಳಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕಬ್ಬು ಬೆಳೆಗಾರರ ನೋವು ಕೇಳುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ಜೈಕರವೇ ಸಂಘಟನೆಯ ಕಾರ್ಯಕರ್ತರು, ಚಿಂಚೋಳಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಸಿಎಂ ರಾಜಿನಾಮೆಗೆ ಆಗ್ರಹ: ರೈತನ ಆತ್ಮಹತ್ಯೆಗೆ ಕಾರಣವಾದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಬಿಜೆಪಿ ರೈತ ಮೋರ್ಚಾದ ಮುಖಂಡರು ಆಗ್ರಹಿಸಿದರು.
ಜೈಕರವೇ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರು ಗುಲ್ಬರ್ಗದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಕಬ್ಬು ಬೆಳೆಗಾರರಿಗೆ ತಕ್ಷಣ ಉತ್ತಮ ಬೆಲೆ ನಿಗದಿಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಶ್ರದ್ಧಾಂಜಲಿ: ಮೃತ ರೈತ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಹೆಚ್ಚಿನ ಪರಿಹಾರ ಧನ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮೃತ ರೈತನ ಆತ್ಮಹತ್ಯೆಗೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ ಹಾಗರಗಿ, ಸಚೀನ್ ಫರಹತಾಬಾದ್, ಚನ್ನು ಮರಬ, ಅಸ್ಫಾಕ್ ಬಂದರವಾಡ, ಬಿ. ಜಯಸಿಂಗ್, ಶ್ರೀಕಾಂತ ಆಲೂರ್, ಚಂದ್ರಕಾಂತ ಪಾಟೀಲ್, ಶಿವು ಹಾಗರಗಾ, ಭೀಮರಾವ ಪಾಟೀಲ್, ಲಕ್ಷ್ಮೀಪುತ್ರ ಸಾಹು, ಸಚೀನ್ ಗೌಳಿ, ಸುರೇಶ, ಸಂದೇಶ ಪವಾರ ಇತರರು ಇದ್ದರು.
ಚಿಂಚೋಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ, ಪ್ರದೀಪ ತಿರಲಾಪುರ, ಜಯಶ್ರಿ ದೊಡ್ಮನಿ, ಕೊಳ್ಳೂರ ಹಣಮಂತರೆಡ್ಡಿ, ಉಮಾಪತಿ ಚಂದ್ರಂಪಳ್ಳಿ, ಗೋಪಾಲ ಭಜಂತ್ರಿ ಇತರರು ಭಾಗವಹಿಸಿದ್ದರು.
ಚಿಂಚೋಳಿಯಲ್ಲಿ  ರಸ್ತೆ ತಡೆ
ಚಿಂಚೋಳಿ:  ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧದ ಎದುರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈತರನ್ನು ಕಡೆಗಣಿಸಿರುವ ಸರ್ಕಾರ ಕೂಡಲೇ ಆತ್ಮಹತ್ಯೆ ಮಾಡಿಕೊಂಡಿರುವ ಕಬ್ಬು ಬೆಳೆಗಾರ ರೈತನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ರಸ್ತೆತಡೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆದ ಕಬ್ಬು ಬೆಳೆಗಾರರು ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಲೆ ಬಂದಿದೆ. ಆದರೆ, ಸರ್ಕಾರ ರೈತರ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು.
ರೈತ ವಿರೋಧಿ ನೀತಿ: ಬೆಳಗಾವಿ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಬ್ಬು ಬೆಳೆಗಾರರು ಒತ್ತಾಯಿಸಿದರೂ, ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.
ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಚಿಂಚೋಳಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆಗೊಳಿಸಿದರು.
ಪ್ರದೀಪ ತಿರಲಾಪುರ, ಜಯಶ್ರಿ ದೊಡ್ಮನಿ, ಕೊಳ್ಳೂರ ಹಣಮಂತರೆಡ್ಡಿ, ಉಮಾಪತಿ ಚಂದ್ರಂಪಳ್ಳಿ, ಗೋಪಾಲ ಭಜಂತ್ರಿ ಇತರರು ಭಾಗವಹಿಸಿದ್ದರು.
ಆಳಂದದಲ್ಲಿ ಧರಣಿ  
ಆಳಂದ:  ಪ್ರತಿ ಕ್ವಿಂಟಲ್ ತೊಗರಿಗೆ ರು. 6500 ಬೆಂಬಲ ಬೆಲೆ ನೀಡುವುದೂ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಕಿಸಾನ ಸಭಾ ಕಾರ್ಯಕರ್ತರು ಸ್ಥಳೀಯ ತಹಸೀಲ್ದಾರ್ ಕಚೇರಿ ಮುಂದೆ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.
ಬುಧವಾರದಿಂದ ಎರಡು ದಿನಗಳ ಕಾಲದ ಈ ಸತ್ಯಾಗ್ರಹವನ್ನು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರ ಭರವಸೆಯಿಂದ 2ನೇ ದಿನದ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೌಲಾ ಮುಲ್ಲಾ, ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ ಮಾತನಾಡಿ, ಪಂಪ್‌ಸೆಟ್ ರೈತರಿಗೆ  ಸಮರ್ಪಕ ವಿದ್ಯುತ್ ಒದಗಿಸಲು ವಿದ್ಯುತ್ ಟ್ರಾನ್ಸಫಾರಂಗಳ ಸಂಖ್ಯೆ ಹೆಚ್ಚಿಸಬೇಕು ಎಂದರು.
ಹಣ ಪಾವತಿಸಿ: ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವ ಕುರಿತು ಸರ್ಕಾರ ಘೋಷಣೆ ಮಾಡಿದೆ. 2008ರಿಂದ ಇದುವರೆಗೂ ರೈತರ ಹೆಸರಿನಲ್ಲಿ ಬಾಕಿ ಇಟ್ಟಿರುತ್ತಾರೆ. ಇದುವರೆಗೂ ರೈತರ ಹೆಸರಿನಲ್ಲಿನ ಪಾವತಿ ಮಾಡಿರುವುದಿಲ್ಲ. ಮನ್ನಾವಾದ ಹಣವನ್ನು ಪಾವತಿಯಾಗಬೇಕು ಎಂದರು.
ಅತಿವೃಷ್ಟಿ, ಅನಾವೃಷ್ಟಿ ಬೆಳೆಹಾನಿ ಪರಿಹಾರವನ್ನು ಕೊಡಬೇಕು. 2012ರ ಸೊಸೈಟಿಗಳ ಸಾಲ ಮನ್ನಾ ಮಾಡಿದ್ದು, ಆ ಬಿಲ್ಲನ್ನು ಪಾವತಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಒದಗಿಸಲು ಹೈನುಗಾರಿಗೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಇತರ ಬೆಳೆ ಸಾಲ ದೊರೆಯಬೇಕು ಎಂದು ಒತ್ತಾಯಿಸಿದರು.
ರಸ್ತೆ ಕಾಮಗಾರಿ: ತಹಸೀಲ್ದಾರರು ಹಾಜರಿದ್ದು ಜೆಸ್ಕಾಂ ಅಧಿಕಾರಿ ವಿಶ್ವನಾಥ ರೆಡ್ಡಿಗೆ ವಿದ್ಯುತ್ ವ್ಯವಸ್ಥೆ ಸರಿಪಡಿಸುವಂತೆ ಹಾಗೂ ಪಿಡಬ್ಲೂಡಿ ಎಂಜಿನೀಯರ್ ಸುನೀಲ ಅವರಿಗೆ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆದೇಶಿಸಿದರು. ಸಿಪಿಐ ಕಾರ್ಯದರ್ಶಿ ಅರುಣಕುಮಾರ್ ರೇಣುಕೆ, ಕಲ್ಯಾಣಿ ಅವುಟೆ, ಮುಖಂಡ ಎಚ್.ಎಸ್. ಪತಕಿ, ತುಕಾರಾಮ ಕುಂಬಾರ, ಬಸವರಾಜ ಪಾಂಡ್ರೆ, ಕುಮಾರ್ ಬಿರಾಜದಾರ ಇತರರು ಉಪಸ್ಥಿತರಿದ್ದರು.
ಖಂಡನೆ: ಬೆಳಗಾವಿ ವಿಧಾನಸೌಧ ಮುಂದೆ ರೈತನ ಆತ್ಮಹತ್ಯೆಗೆ ಅವಕಾಶ ಮಾಡಿಕೊಟ್ಟ ಸರ್ಕಾರದ ಕ್ರಮ ಸರಿಯಲ್ಲ ಎಂದು ಧಂಗಾಪುರದ ರೈತ ಶಿವಶರಣಪ್ಪ ಹಳಿಮನಿ, ಕಮ್ಯೂನಿಸ್ಟ್ ಮುಖಂಡರು ಧರಣಿಯಲ್ಲಿ ಖಂಡಿಸಿ, ಮೃತ ರೈತನ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಪ್ರತ್ಯೇಕವಾಗಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement