ಬಸ್ ಸೌಲಭ್ಯಕ್ಕಾಗಿ ರಸ್ತೆ ತಡೆ
ಕ.ಪ್ರ.ವಾರ್ತೆ ಚಿಂಚೋಳಿ ನ.30
ತಾಲೂಕಿನ ಕೊರವಿ ಗ್ರಾಮದಲ್ಲಿ ಚಿಂಚೋಳಿ ಸಾರಿಗೆ ಘಟಕದಿಂದ ಗುಲ್ಬರ್ಗಕ್ಕೆ ಹೊರಡುವ ಎಲ್ಲ ವೇಗದೂತ (ಎಕ್ಸ್ಪ್ರೆಸ್) ಬಸ್ಸುಗಳನ್ನು ನಿಲುಗಡೆಗೊಳಿಸುವಂತೆ ಒತ್ತಾಯಿಸಿ ತಾಲೂಕು ಕರ್ನಾಟಕ ಪ್ರಾಂತರೈತ ಸಂಘದ ಕಾರ್ಯಕರ್ತರು ಕೊರವಿ ಗ್ರಾಮದ ಚಿಂಚೋಳಿ- ಗುಲ್ಬರ್ಗ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸಿಪಿಐ(ಎಂ) ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಕೊರವಿ ಗ್ರಾಮದಿಂದ ಚಿಂಚೊಳಿ, ಸುಲೇಪೇಟ್, ಕಾಳಗಿ, ರಟಕಲ್ ಹಾಗೂ ಗುಲ್ಬರ್ಗಕ್ಕೆ ಇಲ್ಲಿನ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆಯಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ತೊಂದರೆಯಾಗುತ್ತಿದೆ. ಆಸ್ಪತ್ರೆ ಮತ್ತು ಸರ್ಕಾರಿ ಕೆಲಸ ಕಾರ್ಯಗಳಿಗೆ ಹೋಗಲು ಬಸ್ಸಿಗಾಗಿ ಕಾಯಬೇಕಾಗುತ್ತಿದೆ ಎಂದು ತಿಳಿಸಿದರು.
ತೊಗರಿಗೆ ಪ್ರತಿ ಕ್ವಿಂಟಲ್ಗೆ 6450 ಬೆಲೆ ನಿಗದಿಪಡಿಸಬೇಕು, ತೊಗರಿ ಬೆಳೆ ನೆಟೆ ಮತ್ತು ಗೊಡ್ಡು ರೋಗ ಬೆಳೆಗಳ ಸಮೀಕ್ಷೆ ನಡೆಸಿ ಕೃಷಿ ಇಲಾಖೆಯಿಂದ ಪರಿಹಾರ ಕೊಡಬೇಕು. ಎಲ್ಲರಿಗೂ ಸಮಾನವಾಗಿ ರೇಶನ ಕಾರ್ಡ್ ನೀಡಬೇಕು. ತಾಲೂಕಿನಲ್ಲಿ ಹದಗೆಟ್ಟಿರುವ ಎಲ್ಲ ಪ್ರಮುಖ ರಾಜ್ಯ ಹೆದ್ದಾರಿ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಮುಂತಾದ ಬೇಡಿಕೆಗಳ ಮನವಿ ನೀಡಲಾಯಿತು.
ಘಟಕ ವ್ಯವಸ್ಥಾಪಕ ಬಾಪುಗೌಡ, ಕೆಪಿಆರ್ಎಸ್ ಮುಖಂಡರಾದ ದೇವೀಂದ್ರಪ್ಪ ಪಾಟೀಲ್, ಸಿದ್ದಲಿಂಗಯ್ಯ ಸ್ವಾಮಿ, ದಶರಥ ತಳವಾರ, ಗ್ರಾಪಂ ಸದಸ್ಯ ಕಂಟೆಪ್ಪ ಕೊಡಂಪಳ್ಳಿ, ಮೋಹಜ ಜಾಧವ, ಗುಂಡಯ್ಯ ಸ್ವಾಮಿ, ಸೋಮನಾಥ ಬಿರಾದಾರ, ನಾಗೀಂದ್ರ ಕುಂಬಾರ, ಮನಸೂರ ಅಲಿ, ಖತಾಲಜಿ ಶೇರಗಾರ, ಮಾರುತಿ ಶೀಲವಂತ, ಅಪ್ಪಾರಾವ್ ಸರಡಗಿ ಇತರರು ಇದ್ದರು.