ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದೇಶದಲ್ಲಿ ರಾಜಕೀಯ ಬದಲಾವಣೆ ಖಚಿತ

Vishwanath S
Updated On : 2 Apr 2014, 11:34 am

ಜೇವರ್ಗಿ: ಯುಪಿಎ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತ ದೇಶದ ಜನತೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ಶತಸಿದ್ಧ. ದೇಶದಲ್ಲಿ ರಾಜಕೀಯ ಬದಲಾವಣೆ ಖಚಿತವೆಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವು ನಾಯಕ ಬೆಳಮಗಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 4 ತಿಂಗಳಿಂದ ತಾವು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ಯುವ ಶಕ್ತಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಗೆಲವಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಬೆಳಮಗಿ ತಿಳಿಸಿದರು.
ಮತಯಾಚನೆ: ನಂತರ ಪಕ್ಷದ ಕಚೇರಿಯಿಂದ ಷಣ್ಮುಖ ಶಿವಯೋಗಿಗಳ ಮಠದವರೆಗೆ ಪಾದಯಾತ್ರೆ ನಡೆಸಿ ಮತಯಾಚನೆ ನಡೆಸಿದರು. ಪಾದಯಾತ್ರೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಾಲೂಕು ಬಿಜೆಪಿ ಅಧ್ಯಕ್ಷ ದಂಡಪ್ಪ ಸಾಹು ಕುರಳಗೇರಾ, ರಮೇಶಬಾಬು ವಕೀಲ್, ಧರ್ಮಣ್ಣ ದೊಡ್ಡಮನಿ, ಎಂ.ಬಿ.ಪಾಟೀಲ್, ಮಲ್ಲಿನಾಥಗೌಡ ಯಲಗೋಡ, ಶಿವರಾಜ ಪಾಟೀಲ್ ರದ್ದೇವಾಡಗಿ, ಷಣ್ಮುಖಪ್ಪ ಸಾಹು ಗೋಗಿ, ಪಿ.ಎನ್. ಮಾಲಿಪಾಟೀಲ್, ಅಲ್ಲಾಪಟೇಲ್ ಹೂಡಾ, ಬಸವರಾಜ ಕಂದಗಲ್, ಬಸವರಾಜ ಗುಳಗಿ, ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಸಹರಾಬೇಗಂ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಬಸವರಾಜ ಮಾಲಿಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಮೋ ಅಲೆಯಿಂದ ಬಿಜೆಪಿ ತತ್ತರ: ಖಮರುಲ್
ಗುಲ್ಬರ್ಗ: ನಮೋ ಅಲೆಗೆ ಕಾಂಗ್ರೆಸ್ ತತ್ತರಿಸಿಲ್ಲ, ಬದಲಾಗಿ ಬಿಜೆಪಿಯೇ ತತ್ತರಿಸಿದೆ. ನರೇಂದ್ರ ಮೋದಿ ತನ್ನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಮೂಲಕ ಬಿಜೆಪಿ ತನ್ನ ಪಕ್ಷ ಸಂಘಟನೆಲ್ಲಿಯೇ ಬಿರುಗಾಳಿ ಎಬ್ಬಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
  ತನ್ಮೂಲಕ ಅವರು ಎರಡು ದಿನಗಳ ಹಿಂದಷ್ಟೆ ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ನಮೋ ಅಲೆಗೆ ಕಾಂಗ್ರೆಸ್ ಥರಗುಟ್ಟುತ್ತಿದೆ ಎಂದು ಆಡಿದ್ದ ಲೇವಡಿ ಮಾತಿಗೆ ತಿರುಗೇಟು ನೀಡಿದ್ದಾರೆ.
 ಕಳೆದೊಂದು ವಾರದಿಂದ ಮೆಕ್ಕಾ ಯಾತ್ರೆಗೆ ತೆರಳಿದ್ದ ಇಸ್ಲಾಂ ಈಗ ನಗರಕ್ಕೆ ಮರಳಿದ್ದು ಬರುವ ದಿನಗಳಲ್ಲಿ ಖರ್ಗೆ ಪರ ಬಿರುಸಿನ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
  ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಇಸ್ಲಾಂ, ಖರ್ಗೆಯವರು ನಾಮಪತ್ರ ಸಲ್ಲಿಸುವ ಸಂದರ್ಭದಿಂದ ತಾವು ಅವರೊಂದಿಗೇ ಇದ್ದುದಾಗಿ ಹೇಳಿದರಲ್ಲದೆ ಬರುವ ದಿನಗಳಲ್ಲಿ ತಾವು ಹಾಗೂ ತಮ್ಮ ಶಾಸಕ ಮಿತ್ರರು ಸೇರಿಕೊಂಡು ನಿರಂತರ ಪ್ರಚಾರ ನಡೆಸುತ್ತೇವೆ ಎಂದರು. ಅಲ್ಪಸಂಖ್ಯಾತ ಸಮುದಾಯದವರಂತೂ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಗೆ ಮನಸೋತಿದ್ದಾರೆ. ಕಾಂಗ್ರೆಸ್‌ಗೆ ಬೆಂಬಲಿಸಲಿದ್ದಾರೆ ಎಂದರು.
740.79 ಲೀಟರ್ ಮದ್ಯ ವಶ
ಗುಲ್ಬರ್ಗ: ಲೋಕಸಭಾ ಚುನಾವಣೆ ಪ್ರಯುಕ್ತ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಏ.1ರ ವರೆಗೆ  ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 65 ಪ್ರಕರಣಗಳನ್ನು ದಾಖಲಿಸಲಾಗಿದೆ. 740.79 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 60 ಜನರ ವಿರುದ್ಧ ಎಫ್‌ಐಆರ್ ದೂರು ದಾಖಲಿಸಲಾಗಿದೆ.
ಏ.1ರಂದು ಅಬಕಾರಿ ಇಲಾಖೆಯಿಂದ ಎರಡು ಪ್ರಕರಣ ದಾಖಲಿಸಿದ್ದು, 2.43 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದಾಖಲಿಸಿದ ಒಟ್ಟು 65 ಪ್ರಕರಣಗಳಲ್ಲಿ ಅಬಕಾರಿ ಇಲಾಖೆಯಿಂದ ದಾಖಲಿಸಿದ 53 ಪ್ರಕರಣಗಳಿಂದ 536.51 ಲೀಟರ್ ಮದ್ಯ ಹಾಗೂ 3.60 ಕೆ.ಜಿ. ಗಾಂಜಾ ಮತ್ತು ಎರಡು ಬೈಕ್, ಪೊಲೀಸ್ ಇಲಾಖೆಯಿಂದ ದಾಖಲಿಸಿದ 12 ಪ್ರಕರಣಗಳಿಂದ 204.28 ಲೀಟರ್ ಮದ್ಯ ಹಾಗೂ 1.5 ಕೆಜಿ ಸಿಎಚ್ ಪೌಡರ್ ವಶಕ್ಕೆ ಪಡೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement