ಅಭಿವೃದ್ಧಿ ಕಾರ್ಯಗಳೇ ಗೆಲವಿಗೆ ಶ್ರೀರಕ್ಷೆ: ಖರ್ಗೆ
ಕ.ಪ್ರ. ವಾರ್ತೆ ಜೇವರ್ಗಿ ಏ.2
ಕಳೆದ ಐದು ವರ್ಷಗಳ ಅವಧಿಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನಷ್ಟು ಶ್ರಮಿಸುವುದು ಅಗತ್ಯವೆಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅವರು ತಾಲೂಕಿನ ಆಂದೋಲಾದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಜೆಪಿ ಮುಖಂಡರು ತಿದ್ದುಪಡಿಗೆ ವಿರೋಧಿಸಿದ್ದರು:ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತಾವು ಮತ್ತು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತರಲು ನಿರಂತರವಾಗಿ ಶ್ರಮಿಸಿದ್ದೇವೆ. ಬಿಜೆಪಿ ಮುಖಂಡರು 371ನೇ ಕಲಂನ ತಿದ್ದುಪಡಿಗೆ ವಿರೋಧಿಸಿದ್ದರು. ಯುಪಿಎ
ಕಣ್ಣಿಗೆ ಕಾಣುತ್ತಿಲ್ಲ:ಸರ್ಕಾರದ ಸಾಧನೆಗಳನ್ನು ತಾವು ಮಾಡಿರುವ ಕಾರ್ಯಗಳು ಎಂದು ಹೇಳಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ನಾಯಕರು ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಬಿಜೆಪಿಯವರಿಗೆ ಕೇಳುವ ತಾಳ್ಮೆಯಿಲ್ಲ, ಮಾಡುವಂಥ ಶಕ್ತಿಯಿಲ್ಲ. ಕಳೆದ 40 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಅನೇಕ ಸ್ಥಾನಮಾನ ಪಡೆದ ಧರಂಸಿಂಗ್, ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಆದರೆ ನಾವು ಮಾಡಿದ ಜನಪರ ಕಾರ್ಯಗಳು ಅವರ ಕಣ್ಣಿಗೆ ಕಾಣುತ್ತಿಲ್ಲವೆಂದು ಬಿಜೆಪಿ ನಾಯಕರ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ಮೋದಿ ಹೆಸರಿನಲ್ಲಿ ಮತ ಕೇಳುವುದೇ ಸಾಧನೆ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್, ಬಿಜೆಪಿಯವರು, ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟರೇ, ಹೇಳಿಕೊಳ್ಳುವಂಥ ಯಾವುದೇ ಸಾಧನೆ ಅವರು ಮಾಡಿಲ್ಲ ಎಂದರು.
ಶಾಸಕ ಡಾ.ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ನಿಂಗಣ್ಣ ನೇರಡಗಿ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಮಾತನಾಡಿದರು.
ಧರ್ಮಸಿಂಗ್ ಪರ ಮತಯಾಚನೆ
ಚಿಂಚೋಳಿ ವರದಿ: ಬೀದರ್ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಎನ್. ಧರ್ಮಸಿಂಗ್ ಅವರ ಗೆಲವಿಗೆ ಎಲ್ಲ ಕಾಂಗ್ರೆಸ್ ಪಕ್ಷದ ಎಲ್ಲ ಪಪಂ ಸದಸ್ಯರು ತಮ್ಮ ವಾರ್ಡುಗಳಲ್ಲಿ ಪಾದಯಾತ್ರೆ ನಡೆಸಿ ಮತದಾರರ ಮನಮೊಲಿಸಿ ಮತಯಾಚಿಸಬೇಕೆಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಮಿಟಿ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಟ್ಟಣ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಪಪಂ ಅಧ್ಯಕ್ಷೆ ಇಂದುಮತಿ ಶಿವನಾಗಯ್ಯ ಸ್ವಾಮಿ, ಉಪಾಧ್ಯಕ್ಷ ಶಾಮರಾವ ಕೊರವಿ, ಪಪಂ ಸದಸ್ಯರಾದ ರಾಮಶೆಟ್ಟಿ ಪವಾರ, ರಾಜೂ ರಾಠೋಡ, ನರಸಮ್ಮ ವಿಜಯಕುಮಾರ ಗಂಗನಪಳ್ಳಿ ಮಾಜಿ ಉಪಾಧ್ಯಕ್ಷ ಶರಣಪ್ಪಾ ಸುಂಕದ, ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕ ಸಿ.ಬಿ. ಪಾಟೀಲ್ ಓಕಳಿ, ಕೆ.ಎಂ. ಬಾರಿ, ಶಿವಕುಮಾರ ಕೊಳ್ಳುರ, ಆರ್. ಗಣಪತರಾವ, ಕೆ.ಎಂ. ಹಾಶ್ಮಿ, ಜಗನ್ನಾಥ ಕಟ್ಟಿ, ನರಸಪ್ಪಾ ಕಿವಣೋರ ಸೇರಿದಂತೆ ಇತರರು ಭಾಗವಹಿಸಿದ್ದರು.