ಈಗ ಮತ ವಿಭಜನೆ ಗುಮ್ಮ
ಕ.ಪ್ರ. ವಾರ್ತೆ ಗುರುಮಠಕಲ್ ಏ.2
ಗುಲ್ಬರ್ಗ ಲೋಕಸಭಾ ವ್ಯಾಪ್ತಿಯ ಗುರುಮಠಕಲ್ನಲ್ಲೀಗ ಜಾತಿಮತಗಳದ್ದೇ ಲೆಕ್ಕ, ಅದೇ ಆಧಾರವಾಗಿಟ್ಟುಕೊಂಡು ಸಾಗಿದೆ ಮತ ವಿಭಜನೆ ತರ್ಕ.
ತಮ್ಮ ರಾಜಕೀಯ ಬದುಕಲ್ಲಿ ಸಿಂಹಪಾಲು ಗುರುಮಠಕಲ್ನಿಂದಲೇ ಗೆದ್ದು ಶಾಸಕರಾಗಿದ್ದ ಖರ್ಗೆಯವರು ಗುರುಮಠಕಲ್ನಲ್ಲಿ ತಾವು ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾಮಗಾರಿಗಳೇ ಶ್ರೀರಕ್ಷೆ ಎಂದು ಅಂದುಕೊಂಡು ಕೂಡುವುದಕ್ಕೆ ಈ ಚುನಾವಣೆ ಪ್ರಶಸ್ತವಲ್ಲ.
ಏಕೆಂದರೆ- ಖರ್ಗೆ ಉತ್ತರಾಧಿಕಾರಿಯಾಗಿ ಈ ಕ್ಷೇತ್ರ ಪ್ರತಿನಿಧಿಸಿದ ಕೋಲಿ ಸಮಾಜ ಮುಖಂಡ ಬಾಬೂರಾವ ಚಿಂಚನ್ಸೂರ್ ಪ್ರಗತಿಗಿಂತ ಜಾತಿ- ಮತಗಳ ಆಧಾರದಲ್ಲೇ ರಾಜಕಾರಣ ಮಾಡುತ್ತ ಹೊರಟಿದ್ದರಿಂದ ಈ ಬಾರಿ ಸೋಲಿಲ್ಲದ ಸರದಾರನಿಗೆ ತಾವೇ ಪೋಷಿಸಿ ಬೆಳೆಸಿದ್ದ ಗುರುಮಠಕಲ್ ಮತಕ್ಷೇತ್ರದಲ್ಲಿ ತುಸು ಇರಿಸು ಮುರಿಸು ಎಂಬಂತೆ ಬೆಳವಣಿಗೆಗಳು ಸಾಗಿವೆ.
ಜಾತಿ ರಾಜಕಾರಣವೇ ಅಪಥ್ಯ: ಸುದೀರ್ಘ ಕಾಲ ಪೋಷಿಸಿದ್ದ ಗುರುಮಠಕಲ್ನಲ್ಲಿ ಪ್ರಗತಿ ವಿಚಾರಗಳಿಗಿಂತ ಜಾತಿ ರಾಜಕಾರಣವೇ ಮೇಲುಗೈ ಸಾಧಿಸುತ್ತಿರುವುದರಿಂದ ಈ ಬಾರಿ ಇದು ತನ್ನದೇ ಆದಂತಹ ಪರಿಣಾಮ ಚುನಾವಣೆ ಫಲಿತಾಂಶದ ಮೇಲೆ ಬೀರಲಿದೆ ಎಂಬ ಮಾತುಗಳಿವೆ.
1972ರಿಂದ ಗುರುಮಠಕಲ್ನಲ್ಲಿ ರಾಜಕೀಯ ಬದುಕು ಆರಂಭಿಸಿದ ಖರ್ಗೆಯವರು 2005ರವರೆಗೂ ಅಲ್ಲಿಂದಲೇ ಸ್ಪರ್ಧಿಸಿ ಗೆದ್ದವರು. 8 ಬಾರಿ ಸತತ ಗೆದ್ದು ಶಾಸಕರಾಗಿದ್ದ ಖರ್ಗೆ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಗುರುಮಠಕಲ್ ಸಾಮಾನ್ಯ ಕ್ಷೇತ್ರವಾದಾಗ ಚಿತ್ತಾಪುರಕ್ಕೆ ಬಂದವರು. ಆಗ ಚಿತ್ತಾಪುರದ ಸಾಸಕ ಬಾಬೂರಾವ ಚಿಂಚನ್ಸೂರ್ ಗುರಮಠಕಲ್ಗೆ ಬಂದು ಗೆದ್ದರು. ಆಗಲೇ ಶುರುವಾಗಿದ್ದು ಇಲ್ಲಿ ಜಾತಿ ರಾಜಕಾರಣ.
ಹೆಚ್ಚಿದ ಜಾತಿ ಲೆಕ್ಕಚಾರ: ಇಲ್ಲಿನ ಮತದಾರರು ಪಕ್ಷ, ಅಭ್ಯರ್ಥಿಗಿಂತ ತಮ್ಮ ಸಮಾಜದ ಕರೆ ಹಾಗೂ ಸಮಾಜಕ್ಕೆ ನೆರವಾಗುವ ಅಭ್ಯರ್ಥಿಗಳಾರು ಎಂದು ಹೆಚ್ಚು ಪ್ರಾಶಸ್ಯ್ತ ನೀಡುತ್ತಿರುವುದೇ ಜಾತಿ ಲೆಕ್ಕ ಹಸಿರು ಚಿಗುರುವಂತಾಗಲು ಕಾರಣವಾಗಿದೆ.
ಕ್ಷೇತ್ರದಲ್ಲಿರುವ 2 ಲಕ್ಷ ಮತದಾರರ ಪೈಕಿ 30 ಸಾವಿರ ಲಂಬಾಣಿ, 24 ಸಾವಿರ ಎಸ್ಸಿ ಮತ್ತು ಎಸ್ಟಿ, 55 ಸಾವಿರ ಕಬ್ಬಲಿಗ ಸಮಾಜ, 16 ಸಾವಿರ ಲಿಂಗಾಯತ, 85 ಸಾವಿರ ಅಲ್ಪಸಂಖ್ಯಾತರು ಹಾಗೂ ಇತರೆ ಸಮಾಜದವರ ಮತಗಳಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರಿಗೆ ಗುರುಮಠಕಲ್ನಿಂದ 16 ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದವು. ಈ ಬಾರಿ ಇದೇ ಬಹುಮತ ಕಾಂಗ್ರೆಸ್ ಹುರಿಯಾಳು ಇಲ್ಲಿ ಗಳಿಸುವರೇ ಎಂಬುದೇ ಪ್ರಶ್ನೆಯಾಗಿದೆ. ಮೋದಿ ಅಲೆ, ಜಾತಿ ಲೆಕ್ಕ, ಮತಗಳ ವಿಭಜನೆಯಿಂದಾಗಿ ಗುರುಮಠಕಲ್ನಲ್ಲಿ ವಿಚಿತ್ರ ಗಾಳಿ ಬೀಸುತ್ತಿದೆ.
ಮತಗಳ ವಿಭಜನೆ: ಇಲ್ಲಿ ನಡೆಯಲ್ಲಿರುವ ಜಾತಿ ಲೆಕ್ಕಾಚಾರದಲ್ಲಿ ಮತಗಳ ವಿಭಜನೆಯೂ ನಡೆಯಲಿದೆ. ಕಳೆದ ಬಾರಿ ಸೋಲನ್ನು ಅನುಭವಿಸಿದ ತಮ್ಮ ಸಮಾಜದ ರೇವುನಾಯಕ ಬೆಳಮಗಿಯವರಿಗೆ ಈ ಸಲ ಒಂದು ಅವಕಾಶವನ್ನು ನೀಡಬೇಕು. ತಮ್ಮ ಸಮಾಜದ ನಾಯಕನಿಗೆ ಬೆಂಬಲ ವ್ಯಕ್ತಪಡಿಸಬೇಕು ಎನ್ನುವ ನಿರ್ಧಾರಕ್ಕೆ ಲಂಬಾಣಿ ಸಮಾಜದ ಜನತೆ ಬಂದಿರುವುದು. ದೇಶದೆಲ್ಲೆಡೆಯಲ್ಲಿ ಇರುವ ಮೋದಿ ಅಲೆ ಮತ್ತು ಬಿಜೆಪಿ ತನ್ನದೇ ಅದಂತಹ ಮತ ಬ್ಯಾಂಕ್ ಇರುವುದು, ಯುವಕರ ಮತಗಳು ಈ ಬಾರಿ ಬಿಜೆಪಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವುದರಿಂದಾಗಿ ಮತಗಳ ವಿಭಜನೆಯಾಗಲಿದೆ.
ಈಡಿಗ ಸಮಾಜವೂ ಮುನಿಸು: ಕಾಂಗ್ರೆಸ್ ಭದ್ರ ಬುನಾದಿಯಂತಿದ್ದ ಈಡಿಗ ಸಮಾಜದ ಮತಗಳು 'ಕೈ'ಗೆ ಲಭಿಸುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ತಮ್ಮ ಸಮಾಜದ ಅಫಜಲ್ಪುರ ಶಾಸಕ ಮಾಲಿಕಯ್ಯ ಗುತ್ತೆದಾರ ಅವರಿಗೆ ಸಚಿವ ಸ್ಥಾನ ತಪ್ಪುವಲ್ಲಿ ಖರ್ಗೆ ಪಾತ್ರ ಅತ್ಯಂತ ಮಹತ್ವದ್ದು ಎಂದು ನಂಬಿರುವ ಸಮಾಜದವರು ಈ ಬಾರಿ ಖರ್ಗೆಯವರಿಗೆ ಬೆಂಬಲ ಸೂಚಿಸದಂತೆ ಬೇರೆ ಪಕ್ಷಕ್ಕೆ ಮನ್ನಣೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಜೊತೆಗೇ ಅನೇಕ ಸಂಗತಿಗಳು ಮತ ವಿಭಜನೆಗೆ ಕಾರಣವಾಗಲಿವೆ ಎಂಬ ಮಾತುಗಳಿವೆ. ಜೆಡಿಎಸ್, ಎಎಪಿ ಪಾರ್ಟಿಗಳೂ ಮತ ವಿಭಜನೆಗೆ ಪುಷ್ಟಿ ನೀಡಲಿವೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.