ಜಾತ್ಯತೀತ ವ್ಯಕ್ತಿಗೆ ಬೆಂಬಲ
ಆಳಂದ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ತಮ್ಮ ಗೆಲವಿಗಾಗಿ ಮತದಾರರಿಗೆ ಆಮಿಷವೊಡ್ಡಿದ್ದಾರೆಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವೀರಣ್ಣ ಕೋರಳ್ಳಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಗೆಲವಿಗೆ ಹಣದ ಹೊಳೆಯನ್ನೇ ಹರಿಸಿ ಕಾನೂನು ಉಲ್ಲಂಘಿಸಿದ್ದಾರೆ. ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು ಕೂಡಲೇ ಅಕ್ರಮ ಹಣ ಹಂಚಿಕೆಯದೂರು ದಾಖಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಚುನಾವನೆಯಲ್ಲಿ ಬೀದರ್ ಮತ್ತು ಗುಲ್ಬರ್ಗ ಕ್ಷೇತ್ರದಲ್ಲಿ ಜಾತ್ಯತೀತ ನಿಲುವು ಹೊಂದಿರುವ ವ್ಯಕ್ತಿಗೆ ಬೆಂಬಲಿಸಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಹಿಂದೆಯೂ ಚುನಾವಣೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರ ಕೆಲಸವನ್ನು ಮಾಡಿಲ್ಲ. ಪ್ರಾಮಾಣಿಕ ಮತ್ತು ಅಭಿವೃದ್ಧಿಪರ ವ್ಯಕ್ತಿಗಳನ್ನು ಬೆಂಬಲಿಸುತ್ತಾ ಬರಲಾಗಿದೆ ಎಂದರು.
ದೇಶದ ಅಭಿವೃದ್ಧಿಗಾಗಿ ಏ.10ರಂದು 87 ಗ್ರಾಮ ಶಾಖೆಗಳ ಪದಾಧಿಕಾರಿಗಳ ಸಭೆ ಕರೆದು ಸೂಕ್ತ ಅಭ್ಯರ್ಥಿಗಳ ಗೆಲವಿಗೆ ಬೆಂಬಲಿಸುವ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಸಂಸದ ಧರಂಸಿಂಗ್ ಅವರು ಈ ಭಾಗದಲ್ಲಿ ತೊಗರಿ ಹಾಗೂ ಕಬ್ಬಿನ ಬೆಳೆ ಸಮಸ್ಯೆ ಕುರಿತು ಚಕಾರ ಎತ್ತಿಲ್ಲ. ಅಲ್ಲದೆ, 371(ಜೆ)ನೇ ಕಲಂ ಜಾರಿಗೆ ಎಳ್ಳಷ್ಟೂ ಪ್ರಯತ್ನ ಮಾಡಿಲ್ಲ. ಖರ್ಗೆ ಪ್ರಯತ್ನ ಮಾಡಿದ್ದಾರೆ. ವೈಜನಾಥ ಪಾಟೀಲರು ಕೇವಲ ಮೂರು ಹೋರಾಟ, ಹೈ.ಕ. ಬಂದ್ ಕರೆ, ರೈಲು ತಡೆ, ಪ್ರತ್ಯೇಕ ರಾಜ್ಯಕ್ಕಾಗಿ ಕಪ್ಪು ಬಾವುಟ ತೋರಿದ್ದು ಬಿಟ್ಟರೆ ಹೋರಾಟವನ್ನೇ ಮಾಡಿಲ್ಲ. ಈಗ ಕಾಂಗ್ರೆಸ್ ಸೇರಿ ನರೇಂದ್ರ ಮೋದಿ ವಿರುದ್ಧ ಹಿಟ್ಲರ್ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕೋರಳ್ಳಿ ಹೇಳಿದರು.