ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಲ್ಲಿ ತರುಣರೇ ನಿರ್ಣಾಯಕರು

Mainashree
Updated On : 4 Apr 2014, 10:48 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.3
ಗುಲ್ಬರ್ಗ ಲೋಕಸಭಾ(ಎಸ್ಸಿ ಮೀಸಲು) ಕ್ಷೇತ್ರದಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯಾಗಿ 59,307 ಮತದಾರರು ಹೊಸತಾಗಿ ನೋಂದಣಿಯಾಗಿದ್ದಾರೆ.
 ಇವರಲ್ಲಿ ಶೇ.99ರಷ್ಟು ಯುವ ಮತದಾರರು. ಇವರಿಗೆಲ್ಲರಿಗೂ ಮತದಾನ ಚೊಚ್ಚಲ ಅನುಭವ. ಅದರಲ್ಲೂ 2014ರ ಲೋಕ ಸಮರದಲ್ಲಿ ಮೊದಲ ಮತದಾನ ಅನುಭವ ಪಡೆಯಲಿರುವ ಯುಪಡೆಯ ಚಿತ್ತ ಯಾರತ್ತ ಎಂಬುದೇ ಇದೀಗ ನಿಗೂಢ. ಹೀಗಾಗಿ ಗುಲ್ಬರ್ಗ ಗದ್ದುಗೆ ಗುದ್ದಾಟದಲ್ಲೀಗ ತರುಣ ಮತದಾರರೇ ನಿರ್ಣಾಯಕ ಪಾತ್ರ ವಹಿಸೋದು ನಿಶ್ಚಿತ.
  2014ರ ಜನವರಿ 31ರವರೆಗೂ ಜಿಲ್ಲೆಯ 8 ಅಸೆಂಬ್ಲಿ ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯಾಬಲ 16,62,359 ಇದ್ದದ್ದು 2 ತಿಂಗಳಲ್ಲಿ 17,21,666ಕ್ಕೆ ಹೆಚ್ಚಿದೆ. ಬರೋಬ್ಬರಿ 59,304 ಮತದಾರರು ಹೊಸತಾಗಿ ನೋಂದಣಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ.
  ಏಕೆಂದರೆ ಜಿಲ್ಲೆ ಕಂಡ ಸಾರ್ವತ್ರಿಕ ಚುನಾವಣೆಗಳ ಯಾವ ಸಮಯದಲ್ಲಿಯೂ ಈ ಪರಿ ಹೊಸಬರು ಮತದಾರರ ಯಾದಿಗೆ ಸೇರ್ಪಡೆಯಾಗಿರಲಿಲ್ಲ. ಆದರೆ 2014ರ ಲೋಕ ಸಮರ ಹೊಸ ಮತದಾರರ ಪ್ರವಾಹವನ್ನೇ ಹುಟ್ಟು ಹಾಕಿದ್ದಲ್ಲದೆ ಇವರೆಲ್ಲರೂ ಮೊದಲ ಮತದಾನಕ್ಕೆ ಸಜ್ಜಾಗಿರುವುದರಿಂದ ಜಿಲ್ಲೆಯ ರಾಜಕೀಯ ಸ್ವರೂಪ, ಅದು ಸಾಗಬೇಕಾದ ದಿಕ್ಕು- ದೆಸೆಗಳಲ್ಲಿ ತಮ್ಮ ಅಭಿಮತ ಹೇಳುವ ತವಕ ಇವರದ್ದು.
ನೋಂದಣಿ ಜಾಗೃತಿ ಅಭಿಯಾನದ ಫಲ: ಜಿಲ್ಲಾಡಳಿತ ವಾರ್ತಾ ಇಲಾಖೆ ಸಹಯೋಗದಲ್ಲಿ ಮತದಾನ ಜಾಗೃತಿ, ಮತದಾರರಾಗಿ ನೋಂದಣಿಗಾಗಿ ನಡೆಸಿದ ಅರಿವಿನ ಕಾರ್ಯಕ್ರಮಗಳಿಂದಾಗಿಯೇ ಜಿಲ್ಲೆಯಲ್ಲಿ ಈ ಬಾರಿ ಹೊಸ ಮತದಾರರ ತಂಡವೇ ಹುಟ್ಟಿಕೊಂಡಿತು.
  ಕಾಲೇಜುಗಳಲ್ಲಿ ಮತದಾರರ ನೊಂದಣಿಗೆ ಮುಂದಾದ ಜಿಲ್ಲಾಡಳಿತದ ಕಾರ್ಯಕ್ಕೆ ಭಾರಿ ಸ್ಪಂದನೆ ದೊರಕಿತು. ಅಲ್ಲದೆ ನಗರ ಹಾಗೂ ತಾಲೂಕು ಮಟ್ಟದಲ್ಲಿಯೂ ಈ ಕೆಲಸ ವ್ಯವಸ್ಥಿತವಾಗಿ ನಡೆದಿದ್ದರ ಪರಿಣಾಮವೇ ಹೊಸ ಮತದಾರರ ಪ್ರವಾಹವೇ ಉಕ್ಕಲು ಕಾರಣವಾಯ್ತು.
  ಕಾಲೇಜುಗಳಿಗೆ ಫಾರ್ಮ್ ನಂ.6 ಸರಬರಾಜು ಮಾಡಿ, ಅಲ್ಲಿಯೇ ಮಾಹಿತಿ ಕಲೆಹಾಕಿ ನೋಂದಣಿಗೆ ಜಿಲ್ಲಾಡಳಿತ ಶ್ರಮಿಸಿದ್ದರಿಂದಲೇ ಹೊಸ ಮತದಾರರ ಪಡೆ ಇಲ್ಲಿ ತನ್ನ ಅಸ್ತಿತ್ವ ಮೆರೆದಿದೆ. ಅಲ್ಲದೆ ಬರುವ ಮತದಾನ ದಿನದಂದು ಈ ಯುವಕರೇ ನಿರ್ಣಾಯಕ ಮತ ಚಲಾವಣೆ ಮಾಡಲಿದ್ದಾರೆ.
ಪ್ರಬುದ್ಧತೆ ಮೆರೆಯುವರೇ?: ಯುವ ಮತದಾರರೇ ಕಣದಲ್ಲಿ ನಿರ್ಣಾಯಕ ಆಗಿರುವುದರಿಂದ ಇವರು ಪ್ರಬುದ್ಧತೆ, ಜಾಣತನ ಮೆರೆಯಲು ಇದು ಸಕಾಲ. ಹುಡುಗಾಟಿಕೆಗೆ ಎಂಬಂತೆ ಮನಸೋ ಇಚ್ಛೆ ಮತದಾನ ಮಾಡದೆ ಯೋಚಿಸಿ, ಅಭಿವೃದ್ಧಿ ವಿಚಾರಗಳೊಂದಿಗೆ ಹೋಲಿಸಿ ತಮ್ಮ ಮತ ಚಲಾಯಿಸಿದಲ್ಲಿ ಯುವಕರ ಈ ಜಾಣ ನಡೆ ಜಿಲ್ಲೆಯ, ದೇಶದ ಹಿತಕ್ಕೆ ಕೊಡುಗೆ ನೀಡುವುದು ನಿಶ್ಚಿತ.
  ಯುವ ಮತದಾರರು ನೋಂದಣಿಯಲ್ಲಿ ತೋರಿದಷ್ಟು ಆಸಕ್ತಿ ಮತದಾನದ ದಿನ ತೋರೋದಿಲ್ಲ ಎಂಬ ಮಾತುಗಳಿದ್ದರೂ ಇವುಗಳನ್ನೆಲ್ಲ ಮೆಟ್ಟಿ ನಿಂತು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಬೇಕಲ್ಲದೆ ದೇಶದ ಭದ್ರ ಭವಿಷ್ಯಕ್ಕಾಗಿ ಮತ ಚಲಾಯಿಸುವ ಜಾಣ್ಮೆಯನ್ನು ಮೆರೆಯಬೇಕಾಗಿದೆ.
ಯಾರು ಹಿತವರು?: ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆ ಬಯಸಿದ್ದರೆ, ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿ ಪ್ರಧಾನಿ ಮಾಡಲು ರೇವುನಾಯಕ ಬೆಳಮಗಿ ಬಿಜೆಪಿಯಿಂದ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಡಿಜಿ ಸಾಗರ್, ಎಎಪಿಯಿಂದ ಲಲಿತಾ ನಾಯಕ, ಬಿಎಸ್ಪಿಯಿಂದ ಮಹಾದೇವ ಧನ್ನಿ ಸೇರಿದಂತೆ ಕಣದಲ್ಲಿರುವ 8 ಜನರ ಪೈಕಿ ಯಾರು ಹಿತವರು ಎಂಬ ವಿಮರ್ಶೆ ಯುವಕರಾದವರು ಮಾಡಲೇಬೇಕಾದಂತಹ ಅನಿವಾರ್ಯತೆ ಇದೀಗ ಬಂದೊದಗಿದೆ.
  ಸೋಲಿಲ್ಲದ ಸರದಾರ ಖರ್ಗೆ ಹಾಗೂ ಕುಸ್ತಿಪಟು ರೇವುನಾಯಕ ಸ್ಪರ್ಧೆಯಿಂದಾಗಿ ಹಳೆಹುಲಿಗಳ ಹಣಾಹಣಿಯ ಕಣವಾಗಿರುವ ಇಲ್ಲಿ ಕದನ ಕಲಿಗಳ ಹಣೆಬರಹ ಬರೆಯೋ ಜವಾಬ್ದಾರಿ ಹೊಸ ಮತದಾರರ ಹೆಗಲೇರಿದೆ.

ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement