ಕೈ ಬಿಡಬ್ಯಾಡ್ರಿ, ಗಟ್ಟಿ ಹಿಡೀರಿ: ಖರ್ಗೆ
ಗುಲ್ಬರ್ಗ: ಅಫಜಲ್ಪುರ ಕ್ಷೇತ್ರದಾಗ ಹೋದ ಇಲೆಕ್ಷನ್ದಾಗ ಕಮಲಕ್ಕೆ ಬಹುಮತ ಬಂದ ವಿಚಿತ್ರ ಬೆಳವಣಿಗೆಯಿಂದ ಸ್ವಲ್ಪದರಲ್ಲೇ ಪಾರಾದೆ.
ಆದ್ರ ಈ ಬಾರಿ ಹಂಗ ಮಾಡಬ್ಯಾಡ್ರಿ, ಸಂಸದನಾಗಿ 5 ವರ್ಷದಾಗ ನಾನು ಮಾಡಿರೋ ಕೆಲ್ಸಕ್ಕಾದ್ರೂ ವೋಟ್ ಕೊಡ್ರಿ, ನನ್ನ ಕೆಲ್ಸ ಅಳದು- ತೂಗಿ ಮತ ಹಾಕ್ರಿ. ಅಫಜಲ್ಪುರ ಜನ ಈ ಸಾರಿ ನನ್ನನ್ನ ಬೆಂಬಲಿಸ್ತೀರಿ ಅಂತ ನನಗ ಗಟ್ಟಿ ನಂಬಿಕೆ ಅದ...
ಬಿರುಸಿನ ಪ್ರಚಾರ: ಹೀಗೆಂದವರು ಗುಲ್ಬರ್ಗ ಕಣದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಹುರಿಯಾಳು ಮಲ್ಲಿಕಾರ್ಜುನ ಖರ್ಗೆ. ಗುರುವಾರ ಅಫಜಲ್ಪುರ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡ ಖರ್ಗೆ ಕರ್ಜಗಿ ಬಹಿರಂಗ ಸಭೆಯಲ್ಲಿ ಮೇಲಿನಂತೆ ಹೇಳಿದಾಗ ಸೇರಿದ್ದ ಜನ ನಕ್ಕರು. ಈ ಬಾರಿ ಹೀಗಾಗೋದಿಲ್ಲ ಬಿಡ್ರಿ ಅಂತ ಹಲವರು ಆಶ್ವಾಸನೆ ಸಹ ನೀಡಿದರು.
2009 ರ ಚುನಾವಣೆಲ್ಲಿ ಅಫಜಲ್ಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸಹ ಅಲ್ಲಿ ಬಿಜೆಪಿಗೆ 13 ಸಾವಿರದಷ್ಟು ಬಹುಮತ ಬಂದಿತ್ತು. ಈ ಬೆಳವಣಿಗೆ ಖರ್ಗೆ ಗೆಲವಿನ ಅಂತರದ ಮೇಲೆ ತುಂಬ ಪರಿಣಾಮ ಬೀರಿದ್ದು ಇತಿಹಾಸ.
ಕೂಲಿ ಕೊಡಿ: ತಾವು ಕಳೆದೈದು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಪಟ್ಟಿ ಮಾಡಿದ ಖರ್ಗೆ, ಮಾಡಿದ ಕೆಲಸಕ್ಕೆ ಇದೀಗ ಕೂಲಿ ಕೇಳುತ್ತಿರುವುದಾಗಿ ಹೇಳಿದರು. ಕೆಲಸವನ್ನೆಲ್ಲ ಅಳೆದು- ತೂಗಿ ಲೆಕ್ಕಹಾಕಿಯೇ ಕೂಲಿ ಕೊಡಿ ಎಂದು ಸೇರಿದ್ದ ಜನಸ್ತೋಮಕ್ಕೆ ಕೇಳಿಕೊಂಡರು.
ಚೌಡಾಪುರ- ಕರ್ಜಗಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆಯಾಗಿದೆ. ಆದಾಗ್ಯೂ ಈ ಕಾಮಗಾರಿ ಕಾರ್ಯಾರಂಭವಾಗದ ಸಂಗತಿಯನ್ನೂ ಸಭೆಯಲ್ಲಿ ಪ್ರಸ್ತಾಪಿಸಿದ ಖರ್ಗೆ ಬರುವ ದಿನಗಳಲ್ಲಿ ಇಂತಹ ಸಮಸ್ಯೆಗಳೆಲ್ಲದಕ್ಕೂ ಪರಿಹಾರ ಹುಡುಕುವುದಾಗಿ ಹೇಳಿದರು.
ಖರ್ಗೆ ಗುಣಗಾನ: ಶಾಸಕ ಮಾಲೀಕಯ್ಯಾ ಗುತ್ತೇದಾರ್ ಮಾತನಾಡುತ್ತ ಖರ್ಗೆಯವರ ಇಚ್ಛಾಶಕ್ತಿಯಿಂದಲೇ ನೀರಾವರಿ ಯೋಜನೆಗಳಿಗೆ ಹಣ ಬಂದಿದೆ.
ಇದಲ್ಲದೆ ಅನೇಕ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಹಣ ಕೇಂದ್ರದ ಅನುದಾನ ರೂಪದಲ್ಲಿ ದಕ್ಕುವಂತಾಗಲು ಖರ್ಗೆಯವರೇ ಕಾರಣ ಎಂದು ಗುಣಗಾನ ಮಾಡಿದರು.
ಇಕ್ಬಾಲ್ ಅಹ್ಮದ್ ಸರಡಗಿ, ಮಹಾಂತೇಶ ಪಾಟೀಲ್, ಭಾಗಣಗೌಡ ಸಂಕನೂರ್, ಮಕ್ಬೂಲ್ ಪಟೇಲ್ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಮಣ್ಣೂರ, ಶೇಷಗಿರಿವಾಡಿ, ಉಡಚಣ, ಮಾಶಾಳ, ಕುಡಗಿನೂರ್ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಜನತೆ ಕಾಂಗ್ರೆಸ್ ರ್ಯಾಲಿಗೆ ಆಗಮಿಸಿದ್ದು ವಿಶೇಷವಾಗಿತ್ತು.