ಮೋದಿ ಗಾಳಿಗೆ ನಡುಕ
ಚಿತ್ತಾಪುರ:ಕಳೆದ 40 ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರದ ಸರ್ಕಾರಗಳಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿರುವ ಖರ್ಗೆರವರು ಈ ಭಾಗಕ್ಕೆ ನೀಡಿದ ಕೊಡುಗೆ ಏನು? ಅದರಲ್ಲೂ ದಲಿತರಿಗೆ ಅವರಿಂದ ಸಂದ ಕೊಡುಗೆ ಏನು ಎಂದು ಬಿಜೆಪಿ ಮುಖಂಡ ಧರ್ಮಣ್ಣ ಇಟಗಾ ಪ್ರಶ್ನಿಸಿದರು.
ಅವರು ಪಟ್ಟಣದ ವಿಶ್ವಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಎಲ್‌ಒ ಹಾಗೂ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ದಲಿತರ ಹೆಸರು ಹೇಳಿಕೊಂಡು ಖರ್ಗೆ ರಾಜಕಾರಣ ಮಾಡುತ್ತಿದ್ದರೂ ಇಂದಿಗೂ ದಲಿತರು ಪ್ರಗತಿ ಕಂಡಿಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಶಶಿಲ ನಮೋಶಿ ಮಾತನಾಡಿ ದೇಶದಲ್ಲಿ ಎದ್ದಿರುವ ಮೋದಿ ಗಾಳಿಯಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದು, ಹತಾಶರಾಗಿದ್ದಾರೆ ಎಂದರು.
ದೇಶಕ್ಕೊಬ್ಬ ಸಮರ್ಥ ನಾಯಕನ ಅವಶ್ಯಕತೆ ಇದ್ದು, ಗುಜರಾತ್ ಮಾದರಿಯಂತೆ ದೇಶವನ್ನು ಅಭಿವೃದ್ಧಿಪಡಿಸಿ ಭ್ರಷ್ಟಾಚಾರ ಮುಕ್ತ ದೇಶ ನಡೆಸುವುದು ಮೋದಿಯಿಂದ ಮಾತ್ರ ಸಾಧ್ಯ. ಹೀಗಾಗಿ ಜನತೆ ಈ ಸಲ ಬಿಜೆಪಿಗೆ ಮತ ನೀಡಿ ಮೋದಿ ಅವರನ್ನು ಪ್ರಧಾನಿ ಮಾಡಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ ಚವಾಣ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಮುಕುಂದ ದೇಶಪಾಂಡೆ, ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಅವಂಟಿ ಮತ್ತಿತರರಿದ್ದರು.