ಯುವಕನ ಮೇಲೆ ಆ್ಯಸಿಡ್ ದಾಳಿ
ಯಾದಗಿರಿ: ಹೊಲದಲ್ಲಿ ಮಲಗಿದ್ದ ಯುವಕನ ಮೇಲೆ ಅಪರಿಚಿತರು ಆ್ಯಸಿಡ್ ಎರಚಿದ ಘಟನೆ ತಾಲೂಕಿನ ಖಾನಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಣಮಂತ ಗಾಂಜಪ್ಪ ಎಂಬಾತನ ಮೇಲೆ ಆ್ಯಸಿಡ್ ಎರಚಲಾಗಿದ್ದು, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆತನನ್ನು ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಲದಲ್ಲಿ ಕಾವಲು ಕಾಯಲು ತೆರಳಿದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದು, ಆತ ಹೊದ್ದುಕೊಂಡಿದ್ದ ಚಾದರದ ಮೇಲೆ ಆ್ಯಸಿಡ್ ಸುರಿದಿದ್ದಾರೆ. ದಾಳಿಗೆ ಕಾರಣ ತಿಳಿದುಬಂದಿಲ್ಲ. ಗಾಯಗೊಂಡ ಹಣಮಂತ ಹೊಲದಲ್ಲಿ ಕಿರುಚಾಡಿದ್ದಾನೆ. ಅದನ್ನು ಕೇಳಿದ ಪಕ್ಕದ ಹೊಲದಲ್ಲಿದ್ದ ರೈತರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.