ಪ್ರತಿ ಮತವೂ ಮೌಲ್ಯಯುತ ತಪ್ಪದೇ ಚಲಾಯಿಸಿ: ಸಿಇಒ
ಗುಲ್ಬರ್ಗ: ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತ ಹೆಚ್ಚು ಮೌಲ್ಯದಾಗಿದ್ದು, ಈ ಮತಗಳ ಮೌಲ್ಯವನ್ನು ಎತ್ತಿ ಹಿಡಿಯಲು ಎಲ್ಲ ವಿದ್ಯಾರ್ಥಿ ಸಮುದಾಯ ಮತ್ತು ಯುವ ಸಮುದಾಯ ತಪ್ಪದೇ ಮತದಾನ ಮಾಡಬೇಕೆಂದು ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷ ಟಿ.ಹೆಚ್.ಎಂ. ಕುಮಾರ್ ಕರೆ ನೀಡಿದರು. ಗುಲ್ಬರ್ಗ ನಗರದ ವಿವಿಧ ಪದವಿ ಕಾಲೇಜುಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮುದಾಯಕ್ಕಾಗಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂತರ ಕಾಲೇಜುಗಳ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿ.ಜಿ. ಮಹಿಳಾ ಮಹಾವಿದ್ಯಾಲಯ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎಸ್.ವಿ. ಧೂಳಗುಂಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಭಾರಿ ಪ್ರಾಚಾರ್ಯ ಡಾ. ಅನಿಲ್ ಹಾಲು ಮತ್ತು ಬೀ ಬೀ ರಜಾ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಿನ್ಸಿಪಾಲ್ ನಸೀನ್ ಬಾನು ಖುರೈಶಿ ಪಾಲ್ಗೊಂಡಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಆರ್.ಪಿ. ಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ. ರಾಧಕೃಷ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅರ್ಚನಾ ಎಸ್.ಎಂ, ವಾರ್ತಾಧಿಕಾರಿ ಜಿ. ಚಂದ್ರಕಾಂತ್ ಭಾಗವಹಿಸಿದ್ದರು.
ಆಳಂದ: ಚುನಾವಣೆ ಜಾಗೃತಿ ಅಭಿಯಾನ, ಜಾಥಾ
ಆಳಂದ: ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಪ್ರಜಾಪ್ರಭುತ್ವದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕೆಂದು ಸಹಾಯಕ ಚುನಾವಣಾಧಿಕಾರಿ ಎಂ. ಚಿದಾನಂದ ಕರೆ ನೀಡಿದರು. ಪಟ್ಟಣದಲ್ಲಿ ಶನಿವಾರ ನಡೆದ ಚುನಾವಣೆ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರಿಗೆ ಮತದಾನದ ಹಕ್ಕಿದೆ. ಯಾರ ಒತ್ತಡಕ್ಕೂ ಒಳಗಾಗದೆ ಮಹಿಳೆಯರು ಮತ್ತು ಪುರುಷರು, ಯುವಕ, ಯುವತಿಯರು ಧೈರ್ಯದಿಂದ ಮತವನ್ನು ಚಲಾಯಿಸಬೇಕು ಎಂದರು. ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಮಾತನಾಡಿದರು. ತಾಪಂ ಇಒ ಲಕ್ಷ್ಮಣ ಶೃಂಗೇರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯಾ ಇನಾಮದಾರ, ಸಮಾಜ ಕಲ್ಯಾಣಾಧಿಕಾರಿ ಕಮಲಾಬಾಯಿ ತಮನ್, ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ ಪಾಟೀಲ, ಶಿರಸ್ತೆದಾರ ಪ್ರಕಾಶ ಶಿಂದಗಿ, ಸಿಡಿಪಿಒ ಅಶೋಕ ರಾಜನ್, ಕಂದಾಯ ನಿರೀಕ್ಷಕ ಅಬ್ದುಲ ವಾಹಬ, ಶಿವಶರಣಪ್ಪಾ ಪಾಟೀಲ ಹಳ್ಳಿಸಲರಹ, ಡಾ. ಸಂಜಯ ರೆಡ್ಡಿ, ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ಷಣ್ಮೂಖ ಮೊದಲಾದವರು ಉಪಸ್ಥಿತರಿದ್ದರು. ಗುರುಭವನದಿಂದ ಪ್ರಮುಖ ರಸ್ತೆಗಳ ಮೂಲಕ ಬಾಲಕರ ಜ್ಯೂನಿಯರ್ ಕಾಲೇಜು ವರೆಗೆ ಮತದಾನ ಜಾಗೃತಿ ಜಾಥಾ ಕೈಗೊಳ್ಳಲಾಯಿತು.
ಮೋದಿ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ: ಇಟಗಾ
ಚಿತ್ತಾಪುರ: ದೇಶದ ತುಂಬಾ ನಮೋ ಅಲೆ ಇದ್ದು ಭಾರತದ ಮುಂದಿನ ಪ್ರಧಾನಿಯನ್ನಾಗಿ ಮೋದಿ ಅಯ್ಕೆಯಾಗಲು ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿಯವರನ್ನು ಆರಿಸಿ ತರಬೇಕೆಂದು ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ತಾರ ಧರ್ಮಣ್ಣ ಇಟಗಾ ಹೇಳಿದರು. ಪಕ್ಷದ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶಕ್ಕೊಬ್ಬ ಸಮರ್ಥ ನಾಯಕನ ಅವಶ್ಯಕ ಇದೆ. ಕಳೆದ 10 ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ ಆದ ಅಭಿವೃದ್ಧಿ ಮಾದರಿಯಂತೆ ದೇಶವನ್ನು ಅಭಿವೃದ್ಧಿ ಕಡೆ ತಂದು ಭ್ರಷ್ಟಾಚಾರ ಮುಕ್ತ ದೇಶ ನಡೆಸುವ ಶಕ್ತಿ ಮೋದಿಯಿಂದ ಮಾತ್ರ ಸಾಧ್ಯ ಹೀಗಾಗಿ ದಲಿತ ಹಿಂದುಳಿದ ಅಲ್ಪಸಂಖ್ಯಾತರು ಬಿಜೆಪಿ ಮತ ನೀಡಿ ಮೋದಿ ಪ್ರಧಾನಿ ಮಾಡಲು ಶ್ರಮಿಸೋಣ ಎಂದು ಹೇಳಿದರು. ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮುಕುಂದ ದೇಶಪಾಂಡೆ, ಬಲಾಜಿ ಬುರಬುರೆ, ತಾಲೂಕು ಅಧ್ಯಕ್ಷ ಭಿಮರಾಯ ಕರದಾಳ ಮಾತನಾಡಿದರು. ಮುಖಂಡ ರಾಮದಾಸ ಚವ್ವಾಣ, ಪರಮೇಶ್ವರ ಗುಲ್ಬರ್ಗ, ಸತೀಶ ಕಾಂತಾ, ಮರೆಪ್ಪ ಕರದಾಳ, ನಾಗರಾಜ ಹೂಗಾರ, ಮಾರುತಿ ಮುಗಳಕರ್, ರಾಜು ಕುಲ್ಕರ್ಣಿ, ಪರಶುರಾಮ ರಾವುರ, ರಾಮು ಹರವಾಳ, ನಾಗರಾಜ ಅಳ್ಳೋಳ್ಳಿ ಇದ್ದರು.
'ಖೂಬಾ ಜಯ ಖಚಿತ'
ಚಿಂಚೋಳಿ: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಚುನಾವಣೆಯಲ್ಲಿ ಜಯ ಸಾಧಿಸಲಿದ್ದಾರೆಂದು ಸುಲೇಪೇಟ್ ಜಿಪಂ ಸದಸ್ಯ ಸಂಜೀವ್ ಯಾಕಾಪುರ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಶನಿವಾರ ಖೂಬಾ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಎನ್. ಧರಂಸಿಂಗ್ ಚಿಂಚೋಳಿ ಮತಕ್ಷೇತ್ರಕ್ಕೆ ತಮ್ಮ 5 ವರ್ಷದ ಅಧಿಕಾರವಧಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾರೆ. ಅವರ ಅನುದಾನದಿಂದ ಯಾವುದೇ ಅಭಿವೃದ್ಧಿಗೊಂಡಿಲ್ಲ ಎಂದರು. ತಾಲೂಕು ಯುವ ಬಿಜೆಪಿ ಅಧ್ಯಕ್ಷ ವಿಷ್ಣುರಾವ ಮೂಲಗೆ, ಶಶಿಧರ ಸೂಗೂರ, ಶ್ರೀಧರ ಪಾಟೀಲ್, ನಾಗೇಂದ್ರ ಗುರಂಪಳ್ಳಿ, ಸುರೇಶ ಸೇರಿಕಾರ, ಮಲ್ಲಿಕಾರ್ಜುನ ಹಡಪದ, ಸಂದೀಪ ಚವ್ಹಾಣ ಇದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ ಪ್ರಚಾರದಲ್ಲಿ ಭಾಗಿಯಾಗದಿರುವುದಕ್ಕೆ ಅನೇಕ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.