ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲಜ್ಜೆಗೆಟ್ಟ ಬಿಜೆಪಿಯವರು: ಸಿದ್ದು ವಾಗ್ದಾಳಿ

Vishwanath S
Updated On : 6 Apr 2014, 12:29 pm

ಕ.ಪ್ರ. ವಾರ್ತೆ , ಗುಲ್ಬರ್ಗ , ಏ.5
ಬಿಜೆಪಿಯವರು ಅಭಿವೃದ್ಧಿ ಹೆಸರಲ್ಲಿ ಮತಪಡೆದ್ರು, ಅಧಿಕಾರಕ್ಕೆ ಬಂದ ನಂತರ ಮಾಡಬಾರದ್ದನ್ನೆಲ್ಲ ಮಾಡಿ ಮಾನಗೆಟ್ರು, ಲಜ್ಜೆಗೆಟ್ರು. ಇದೇನಾ ಹಿಂದುತ್ವ? ಇದೇನಾ ಸಂಸ್ಕೃತಿ? ಇದೇನಾ ಆರೆಸ್ಸೆಸ್ ತತ್ವ? ಸಿದ್ಧಾಂತ ಮತ್ತು ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ರಾಜ್ಯವನ್ನೇ ಲೂಟಿ ಮಾಡಿತು.  ಇದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನಡೆಸಿದ ವಾಗ್ದಾಳಿಯ ಪರಿ...
ಇಲ್ಲಿನ ಖ್ವಾಜಾ ಬಂದೇನವಾಜ್ ದರ್ಗಾ ಗ್ಯಾರಾ ಸಿಡಿ ಮೈದಾನದ ಮುಂಭಾಗದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿಗೆ ತಿವಿದ ಸಿದ್ದು, ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಹೊರಟಿರುವ ಬಿಜೆಪಿ ಎಲ್ಲಿ, ಬಹುಧರ್ಮ, ಬಹು ಸಂಸ್ಕೃತಿ, ಸಾಮರಸ್ಯ, ಜಾಣ ನಾಯಕರ ತಂಡವನ್ನೇ ಹೊಂದಿರುವ ಕಾಂಗ್ರೆಸ್ ಎಲ್ಲಿ ಎಂದು ಪ್ರಶ್ನಿಸುತ್ತ ಸಾಮರಸ್ಯ ಕದಡುವ ಬಿಜೆಪಿ ಧೋರಣೆಯನ್ನು ಈ ಚುನಾವಣೆಯಲ್ಲಿ ಎಲ್ಲರೂ ವಿರೋಧಿಸಲೇಬೇಕು ಎಂದು ಕರೆ ನೀಡಿದರು.
ಬಳ್ಳಾರಿಯಲ್ಲಿ ಖನಿಜ ಸಂಪತ್ತು ಲೂಟಿಯಾಯ್ತು, ಸದನದಲ್ಲೇ ನೀಲಿಚಿತ್ರ ವೀಕ್ಷಣೆ ಮಾಡಿದ್ರು, ಸ್ನೇಹಿತ ಊಟಕ್ಕೆ ಕರೆದ್ರೆ ಅಲ್ಲಿ ಮಾಡಬಾರದ್ದು ಮಾಡಿದರು. ಹೀಗೆ ಮಾಡಿದವರು ರಾಜ್ಯ ಕಂಡ ಬಿಜೆಪಿ ಸರ್ಕಾರದಲ್ಲಿ ಸಚಿವರು. ಅವರೆಲ್ಲರೂ ಈಗ ಕೋರ್ಟ್, ಕಚೇರಿ, ಜೈಲು ಎಂದು ಅಲೆದಾಡುತ್ತಿದ್ದಾರೆ ಎಂದು ಸಿದ್ದು ಮಾತಿನ ಚಾಟಿ ಬೀಸಿದರು.
ಮೋದಿ ಅಪ್ಪಂಗೂ ಅಂಜೋದಿಲ್ಲ: ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಮಾತನಾಡುತ್ತ ಮೋದಿ ಅಲೆ ಇಲ್ಲವೇ ಇಲ್ಲ, ಮೋದಿಗೆ ಮುಸ್ಲಿಂ ಸಮಾಜದವರು ಅಂಜುವುದೂ ಇಲ್ಲ, ಮೋದಿ ಯಾಕೆ, ಮೋದಿ ಅಪ್ಪ ಬಂದರೂ ಅಂಜೋದಿಲ್ಲ ಎಂದರು. ಖರ್ಗೆ ಗೆಲ್ಲಲು ಅವರು ಇಷ್ಟು ಓಡಾಡಬೇಕಾಗಿರಲಿಲ್ಲ, ಆದರೆ ಚುನಾವಣೆಯಲ್ಲಿ ಪಾತ್ರ ನಿರ್ವಹಿಸುವ ಜಾತಿಯತೆ- ಕೋಮುವಾದಗಳೇ ಇಂದು ಹೆಚ್ಚು ಚರ್ಚೆಯಲ್ಲಿವೆ. ಅವುಗಳಿಂದಾಗಿ ಕೆಲಸ ಮಾಡಿದ ನಾಯಕರೂ ಸಹ ಜನಾಶೀರ್ವಾದ ಕೇಳಲೇಬೇಕಾಗಿದೆ ಎಂದರು.
ಯಡಿಯೂರಪ್ಪ ಸಂಪುಟದಲ್ಲಿನ ಸಚಿವರ ಪೈಕಿ ಹಲವರು ಜೈಲಲ್ಲಿದ್ದರೆ ಇನ್ನೂ ಕೆಲವರು ಬೇಲ್ ಮೇಲಿದ್ದಾರೆ ಎಂದು ಲೇವಡಿ ಮಾಡಿದ ಇಬ್ರಾಹಿಂ, ಯಡಿಯೂರಪ್ಪ ರಾಜ್ಯದಲ್ಲಿ ಆಡಳಿತ ಅಧೋಗತಿಗೆ ಹೋದರೂ ಕಾಳಜಿ ತೋರಲಿಲ್ಲ, ಯಾವಾಗ ಶೋಭಾ ಕರಂದ್ಲಾಜೆ ಅವರ ಮಂತ್ರಿಗಿರಿ ಕೈತಪ್ಪಿತೋ ಆಗ ಕಳವಳಗೊಂಡರು ಎಂದು ವ್ಯಂಗ್ಯ ಮಾಡಿದರು. ಬಿದಾಯಿಯಂತಹ ಮುಸ್ಲಿಂ ಕಲ್ಯಾಣ ಯೋಜನೆಗೂ ಜಾತಿಲೇಪ ಮಾಡಿದ ಬಿಜೆಪಿಗೆ ಯಾವ ಕಾರಣಕ್ಕೂ ಮತ ಹಾಕಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮಾತನಾಡುತ್ತ ಸಿದ್ದರಾಮಯ್ಯ ಸಿಎಂ ಆದ 10 ತಿಂಗಳಲ್ಲೇ ಅಲ್ಪಸಂಖ್ಯಾತರಿಗೆ ಏನೆಲ್ಲಾ ಕೊಡುಗೆ ಘೋಷಣೆಯಾಗಿವೆ ಎಂಬುದನ್ನು ಸವಿಸ್ತಾರವಾಗಿ ಹೇಳುತ್ತ ಬಿಜೆಪಿಯಲ್ಲಿ ಈಗಿರುವ ನಾಯಕರೆಲ್ಲರೂ ನಕಲಿ ಎಂದು ಟೀಕಿಸಿದರು. ಜಸ್ವಂತ ಸಿಂಗ್ ಅವರಂತಹ ಅಸಲಿ ನಾಯಕರನ್ನೇ ಆ ಪಕ್ಷ ಉಚ್ಚಾಟಿಸುತ್ತಿದೆ ಎಂದ ಮೇಲೆ ಅಲ್ಲಿನ ಸ್ಥಿತಿ ಹೇಗಾಗಿದೆ ಎಂಬುದು ಯಾರಾದರೂ ಊಹಿಸಬಹುದು ಎಂದು ಇಸ್ಲಾಂ ನುಡಿದರು.
ಏ.17ಕ್ಕೆ ಖರ್ಗೆ ನಿಶ್ಚಿತಾರ್ಥ- ಸಿದ್ದರಾಮಯ್ಯ ನವವಧು: ಸಿಎಂ ಇಬ್ರಾಹಿಂ ಏ. 17ಕ್ಕೆ ನಿಶ್ಚಿತಾರ್ಥ ನಡೆಯಲಿದ್ದು ಅದಕ್ಕಾಗಿ ಕಾಂಗ್ರೆಸ್ ಗುರುತಿಸಿರುವ ವರ ಮಲ್ಲಿಕಾರ್ಜುನ ಖರ್ಗೆ ಇಲ್ಲೇ ಇದ್ದಾರೆ ಎಂದೇ ಮಾತಿಗೆ ಶುರು ಮಾಡಿದಾಗ ಸೇರಿದ್ದ ಸಭಿಕರೆಲ್ಲರೂ ನಕ್ಕರು. ಇದಲ್ಲದೆ ಮಾತು ಮುಗಿಸುವಾಗ ಸಿದ್ದರಾಮಯ್ಯರನ್ನು ನವವಧುವಿಗೆ ಹೋಲಿಸಿದರು.
ಇನ್ನೂ ಕೈಗೆ ಹಚ್ಚಿರುವ ಮೆಹಂದಿ ಆರಿಲ್ಲ. ನವವಧು ಮದುವೆಯಾಗಿದ್ದಾಳೆ. ಸುಮ್ಮನೆ ಮನೆಯಲ್ಲಿ ಅತ್ತಿತ್ತ ಸುಖವಾಗಿರುವಾಗಲೇ ಈ ಪರಿ ಕೆಲಸ ಮಾಡಿದ್ದಾಳೆ. ಎಲ್ಲರ ಗಮನ ಸೆಳೆದಿದ್ದಾಳೆ. ಇನ್ನು ಆಕೆ ಅಡುಗೆ ಮನೆಗೆ ಹೋಗಿ ಮಸಾಲೆ ಅರೆದು ಸುವಾಸನೆಯ ಅಡುಗೆ ಮಾಡಿದರೆ ಹೇಗಿರಬೇಡ? ಅಂತಹ ಅಡುಗೆಯನ್ನು ಸಿದ್ದರಾಮಯ್ಯ ಮುಂದಿನ 4 ವರ್ಷ 2 ತಿಂಗಳ ಆಡಳಿತದಲ್ಲಿ ನಮಗೆಲ್ಲರಿಗೂ ನೀಡಲಿದ್ದಾರೆ ಎಂದಾಗ ಸಿದ್ದರಾಮಯ್ಯ, ಖರ್ಗೆ ಸೇರಿದಂತೆ ಎಲ್ಲರೂ ನಕ್ಕರು.
ಖುಸ್ರೊ ಹುಸೇನಿ, ಇಕ್ಬಾಲ್ ಅಹ್ಮದ್ ಸರಡಗಿ, ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಮಂತ್ರಿ ವೈಜನಾಥ ಪಾಟೀಲ್, ಮೇಯರ್ ಅಲಿಯಾ ಸರೀನ್, ಇಲಿಯಾಸ ಭಾಗವಾನ್ ಇದ್ದರು.
ಜಾತಿ ಹೆಸರಲ್ಲಿ ಮತ ಕೇಳುವರಿಗೆ ತಕ್ಕಪಾಠ ಕಲಿಸಿ: ಶಾಸಕ ಜಾಧವ
ಗುರುಮಠಕಲ್:  ಬಂಜಾರ ಸಮಾಜದ ಅಭ್ಯರ್ಥಿಯೆಂದು ಹೇಳಿಕೊಂಡು ಜಾತಿ ಹೆಸರಿನಲ್ಲಿ ಮತ ಕೇಳುತ್ತಿರುವ ರಾಜಕೀಯ ಪಕ್ಷದ ನಾಯಕರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಚಿಂಚೋಳಿ ಶಾಸಕ ಉಮೇಶ ಜಾಧವ ಹೇಳಿದ್ದಾರೆ.  ಶನಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಗುಲ್ಬರ್ಗ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬು ಪವಾರ, ಅಂಬರೀಶ ರಾಠೋಡ್ ಮಾತನಾಡಿದರು.
ಖರ್ಗೆ ಗೆಲವು ನಿಶ್ಚಿತ
ಗುರುಮಠಕಲ್: ಖರ್ಗೆಯವರು ಎಷ್ಟು ಅಂತರದ ಮತಗಳಿಂದ ಗೆಲವು ಸಾಧಿಸಲ್ಲಿದ್ದಾರೆ ಎನ್ನುವ ಲೆಕ್ಕಚಾರದಲ್ಲಿ ನಾವು ಇದ್ದೇವೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ್ ಚಿಂಚನಸೂರ್ ವಿಶ್ವಾಸ ವ್ಯಕ್ತಪಡಿಸಿದರು. ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಮೋಟ್ನಳಿ, ಕೋಟಾಗೇರಾ, ಬೆಳಿಗೇರಾ, ಹಾಗೂ ಸೈದಾಪುರ ಗ್ರಾಮಗಳಲ್ಲಿ ಖರ್ಗೆ ಪರವಾಗಿ ಮತಯಾಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement