ಆಮಿಷಕ್ಕೆ ಬಲಿಯಾಗದಿರಿ
ಶಹಾಬಾದ್: ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕು. ಮತದಾರರು ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೆ, ಯೋಗ್ಯ ವ್ಯಕ್ತಿಗೆ ಮತ ನೀಡಿ ದೇಶದ ಭವಿಷ್ಯವನ್ನು ನಿರ್ಧರಿಸುವಂತಾಗಬೇಕು ಎಂದು ಎಸ್.ಎಸ್. ಮರಗೋಳ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಅನೀಲ ಕೊಪ್ಪಳಕರ ಹೇಳಿದರು. ಶುಕ್ರವಾರ ನಗರಸಭೆ ವತಿಯಿಂದ ಆಯೋಜಿಸಿದ್ದ ಮೂರನೇ ಸುತ್ತಿನ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಪ್ರಧಾನಪ್ಪ ಕೊಕಟನೂರ ಮಾತನಾಡಿದರು. ಪೌರಾಯುಕ್ತ ಕೆ. ಗುರುಲಿಂಗಪ್ಪ, ನಗರಸಭೆ ಎಇಇ ಶರಣು ಪೂಜಾರಿ, ಜೆಇ ಬಸವರಾಜ, ಸಾಬಣ್ಣ ಯಾದಗಿರಿ ಸೇರಿದಂತೆ ನಗರ ಸಭೆ ಸಿಬ್ಬಂದಿ, ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡು ನಗರದ ಬೀದಿ, ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಿದರು.
ಧರಂ ಪರ ಜಾಧವ ಪ್ರಚಾರ ಇಂದು
ಚಿಂಚೋಳಿ: ಬೀದರ್ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಧರಂಸಿಂಗ್ ಪರ ಚುನಾವಣಾ ಪ್ರಚಾರವನ್ನು ಏ.7ರಂದು ಶಾಸಕ ಡಾ. ಉಮೇಶ ಜಾಧವ್ ನೇತೃತ್ವದಲ್ಲಿ ತಾಲೂಕಿನ ದೇಗಲಮಡಿ ಗ್ರಾಮದಿಂದ ಪ್ರಾರಂಭಿಸಲಾಗುವುದು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅನೀಲಕುಮಾರ ಜಮಾದಾರ ತಿಳಿಸಿದ್ದಾರೆ.