ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕೈ' ಬಲಪಡಿಸಿದ ಶಾಸಕ ಬಿಆರ್ಪಿ

Rashmi Kasaragodu
Updated On : 7 Apr 2014, 11:27 am

ಕ.ಪ್ರ. ವಾರ್ತೆ    ಗುಲ್ಬರ್ಗ    ಏ.6
ಜಿಲ್ಲೆಯ ಆಳಂದ ಅಸೆಂಬ್ಲಿ ಕೆಜೆಪಿ ಶಾಸಕರಾಗಿದ್ದ ಬಿ.ಆರ್. ಪಾಟೀಲ್ ಈ ಬಾರಿಯ ಲೋಕ ಸಮರದಲ್ಲಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೀದರ್ ಲೋಕಸಭೆ ಕಣದಲ್ಲಿ 'ಕೈ'ಗೆ ಆನೆಬಲ ಬಂದಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ತಮ್ಮ ರಾಜಕೀಯ ನಿಲುವಿನ ಕುರಿತು ಹೇಳಿಕೆ ನೀಡಿದ್ದ ಬಿ.ಆರ್. ಪಾಟೀಲ್ ಗುಲ್ಬರ್ಗದಲ್ಲಿ ಖರ್ಗೆಗೆ ಬೆಂಬಲ ಎಂದಿದ್ದರಾದರೂ ಆಳಂದದಲ್ಲಿ ಬೆಂಬಲ ಯಾರಿಗೆ ಎಂಬುದನ್ನು ಸಸ್ಪೆನ್ಸ್ ಇಟ್ಟಿದ್ದರು. ಭಾನುವಾರ ಕಾಂಗ್ರೆಸ್ಗೆ ತಮ್ಮ ಬೆಂಬಲ ಘೋಷಿಸಿ ಧರಂಸಿಂಗ್ ಅವರ ಪರ ಮತದಾನವಾಗುವಂತೆ ಮಾಡುವ ಸಂಕಲ್ಪ ಮಾಡಿದರು.
ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮಾತನಾಡಿದ ಬಿಆರ್ಪಿ, ಕೋಮುವಾದ ವಿರೋಧಿಸಬೇಕಾಗಿದೆ. ಅದಕ್ಕಾಗಿಯೇ ತಾವು ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು. ಅಲ್ಲದೆ ಆಳಂದದಲ್ಲಿ ಕೆರೆಗಳ ನಿರ್ಮಾಣಕ್ಕೆ, ಅಕ್ರಮ ಸಾರಾಯಿ ಬಂದ್ ಮಾಡುವ ಸಂಕಲ್ಪಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದ್ದರಿಂದ ತಾವು ತಾಲೂಕಿನ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಮಾಡಿದ್ದಾಗಿ ಹೇಳಿದರು.
ಬದಲಾದ ರಾಜಕೀಯದಲ್ಲಿ ಯಾರಿಗೆ ಬೆಂಬಲಿಸಬೇಕೆಂಬ ಬಿಕ್ಕಟ್ಟಿಗೆ ತಾವು ಸಿಲುಕಿದ್ದಾಗ ಗೆಳೆಯ ಸಿದ್ದರಾಮಯ್ಯ ಚರ್ಚಿಸಿದರು. ನೆರವು ಕೋರಿದರು. ಅದಕ್ಕೇ ಈ ನಿರ್ಣಯ ಕೈಗೊಂಡೆ, ಇದರೊಂದಿಗೆ ತಾಲೂಕಿನ ಹಿತ ಕಾಪಾಡುವ ಕೆಲಸಕ್ಕೂ ಮುಂದಾಗಿರುವೆ ಎಂದು ತಮ್ಮ ಕೈ ಬೆಂಬಲಿಸುವ ನಿರ್ಣಯದ ಹಿನ್ನೆಲೆಯನ್ನು ವಿವರಿಸಿದರು.
ಧರಂಸಿಂಗ್ ಚತುರಮತಿ: ಚುನಾವಣೆ ಎದುರಿಸುವುದು ಹೇಗೆಂಬುದನ್ನು ಧರಂಸಿಂಗ್ರಿಂದ ಕಲಿಯಬೇಕು. ಅವರು ತುಂಬ ಚತುರಮತಿ ಎಂದ ಸಿದ್ದರಾಮಯ್ಯ, ಪಾಟೀಲರ ಬೆಂಬಲ ಪಡೆಯುವ ದಿಶೆಯಲ್ಲಿ ಧರಂಸಿಂಗ್ ಯಶ ಕಂಡಿದ್ದಾರೆ. ಇದರಿಂದ ತಾಲೂಕಿಗೂ ಒಳಿತಾಗುತ್ತಿದೆ ಎಂದರು.
ಬಿಜೆಪಿ ಈ ದೇಶದಲ್ಲಿ 2014 ರ ಚುನಾವಣೆ ಗೆದ್ದು ಸರ್ಕಾರ ಮಾಡುವ ಭ್ರಮೆಯಲ್ಲಿದೆ. ಆ ಭ್ರಮೆ ನನಸಾಗಲು ಜನರೇ ಬಿಡುವುದಿಲ್ಲ. ಮೋದಿ ಪ್ರಧಾನಿಯಾಗುವ ಯೋಗ್ಯತೆ ಇಲ್ಲದವರು. ಗುಜರಾತ್ ಉದ್ಧಾರ ಮಾಡಲಾಗದ ಮೋದಿಗೆ ದೇಶ ಉದ್ಧಾರ ಮಾಡಲು ಆಗುತ್ತದೆಯೇ, ಕಟ್ಟಾ ಆರೆಸ್ಸೆಸ್ ಆಗಿರುವ ಮೋದಿ ಅದ್ಹೇಗೆ ಸಾಮರಸ್ಯದ ಭಾರತದ ಸಂಸ್ಕೃತಿ ಪೋಷಕರಾಗಲು ಸಾಧ್ಯ ಎಂದು ಮೋದಿ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿಗೆ ಮತದಾರರಿಂದ ಪಾಠ: ಮಾಜಿ ಕೇಂದ್ರ ಮಂತ್ರಿ ಇಬ್ರಾಹಿಂ ಮಾತನಾಡುತ್ತ ಅತ್ಯಾಚಾರ, ಅನಾಚಾರ, ಹಗರಣಗಳಿಂದಾಗಿ ರಾಜ್ಯದಲ್ಲಿ ಬಿಜೆಪಿ ಮುಖಕ್ಕೆ ಮಸಿ ಹಚ್ಚಿಕೊಂಡಿತ್ತು. ಈಗ ಮೋದಿ ಮಂಕುಬೂದಿಯೊಂದಿಗೆ ಮತದಾರರ ಮುಂದೆ ಬರುತ್ತಿದೆ. ಮತದಾರರೇ ಇಂತಹ ಪಕ್ಷಕ್ಕೆ, ಅದರ ನಾಯಕರಿಗೆ ಪಾಠ ಕಲಿಸುತ್ತಾರೆ ಎಂದು ಲೇವಡಿ ಮಾಡಿದರು.
ಬೀದರ್ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್, ವೀರಣ್ಣ ಮಂಗಾಣೆ ಮಾತನಾಡಿದರು. ದುಧನಿಯ ಸಾತಲಿಂಗಪ್ಪ ಮೇತ್ರೆ, ಔಸಾ ಶಾಸಕ ಬಸವರಾಜ ಮುರುಮ್, ಜಗನ್ನಾಥ ಶೇಗಜಿ, ಸಿದ್ದಣ್ಣ ಮಾಸ್ಟರ್, ಜಿಪಂ ಉಪಾಧ್ಯಕ್ಷೆ ಅನಿತಾ ವಳಕೇರಿ, ಮಾಜಿ ಶಾಸಕ ಧಂಗಾಪುರ ಗೌಡರು ವೇದಿಕೆಯಲ್ಲಿದ್ದರು.



ಮಾಜಿ ಸಿಎಂ ಸಿದ್ದರಾಮಯ್ಯ...!
ಆಳಂದದ ಶ್ರೀರಾಮ ಮಾರುಕಟ್ಟೆಯಲ್ಲಿ ನಡೆದ ಸಿದ್ದರಾಮಯ್ಯ ನೇತೃತ್ವದ ಬಹಿರಂಗ ಸಭೆಯಲ್ಲಿ ನಿರೂಪಕ ಮಾಜಿ ಸಿಎಂ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದಾಗ ಅದನ್ನು ಆಲಿಸಿದ  ಖುದ್ದು ಸಿದ್ದರಾಮಯ್ಯ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಅವಕ್ಕಾದರು. ಮಾಜಿ ಸಿಎಂ ಧರಂಸಿಂಗ್... ಎಂದು ಪದೇ ಪೇದೇ ಹೇಳುತ್ತ ಅದೇ ಅವಸರದಲ್ಲಿ ಸಿದ್ದರಾಮಯ್ಯನವರಿಗೂ ಮಾಜಿ ಎಂದು ಪದಪ್ರಯೋಗ ಮಾಡಿದಾಗ ಆದಂತಹ ಯಡವಟ್ಟು ಕ್ಷಣಕಾಲ ವೇದಿಕೆಯಲ್ಲಿ ಸಂಚಲನ ಮೂಡಿಸಿತ್ತು. ಕ್ಷಣಕಾಲ ಎಲ್ಲರೂ ದಂಗಾಗಿ ಆದ ಅಚಾತುರ್ಯಕ್ಕೆ ಏನು ಹೇಳಬೇಕೋ ತೋಚದೆ ಮೌನವಾದರು.


371(ಜೆ)ನಿಂದ ಸಬ್ಸಿಡಿ ಸಿಗ್ತದ್ರಿ...!
ಕಲಂ 371(ಜೆ)ನಿಂದ ಮುಂದಿನ ಪೀಳಿಗೆಗೆ ಎಲ್ಲಾದರಲ್ಲೂ ಸಬ್ಸೀಡಿ ಸಿಗ್ತದ. ಇದು ಈಗ ಮಹತ್ವದ್ದಲ್ಲ ಅನ್ನಿಸಿದ್ರೂ ಬರೋ ದಿನದಾಗ ಭಾರಿ ಮಹತ್ವದ ಕಲಂ ಆಗ್ತದ. ನೌಕರಿ, ಸೇರಿದಂತೆ ಎಲ್ಲದಕ್ಕೂ ಸಬ್ಸೀಡಿ ಸಿಗೋದಾದ್ರ ಅನುಕೂಲ ಅಲ್ಲೇನ್ರಿ ಎಂದು ವೇದಿಕೆಯಲ್ಲಿ ಜಗನ್ನಾಥ ಶೇಗಜಿ ಪ್ರಶ್ನಿಸಿದಾಗ ಕಲಂ 371 ಬಗ್ಗೆ ಗೊತ್ತಿದ್ದವರಂತೂ ಗೊಳ್ಳಂದು ನಕ್ಕರು. ಕಲಂ 371ನಿಂದ ಉದ್ಯೋಗ, ಶಿಕ್ಷಣ ಹಾಗೂ ಅಭಿವೃದ್ಧಿಯಲ್ಲಿ ವಿಶೇಷ ಮೀಸಲಾತಿ ದೊರಕುತ್ತದೆಯೇ ವಿನಃ ಅದು ಸಬ್ಸೀಡಿಯಂತೂ ಅಲ್ಲವೇ ಅಲ್ಲ. ಆದಾಗ್ಯೂ ಶೆಗಜಿಯವರು ಮೀಸಲಾತಿಯನ್ನೇ ರಿಯಾಯ್ತಿ ಎಂದು ಹೇಳಿದಾಗ ಸಭಿಕರಲ್ಲಿ ವಿಷಯದ ಅರಿವಿದ್ದವರು ಬಿದ್ದುಬಿದ್ದು ನಕ್ಕರು.



ಎಲ್ಲರಿಗೂ ಟೋಪಿ...
ವೇದಿಕೆಯಲ್ಲಿ ಹಾಜರಿದ್ದ ಸಿಎಂ ಸಿದ್ದರಾಮಯ್ಯ ಮೊದಲ್ಗೊಂಡು ಎಲ್ಲರಿಗೂ ಬಿ.ಆರ್. ಪಾಟೀಲ್ ತಮ್ಮ ಪರವಾಗಿ ಗಾಂಧಿ ಟೋಪಿ ಹಾಕಿ ಸತ್ಕರಿಸಿದರು. ಹಾರ, ಶಾಲು ಹಾಕಿ ಸತ್ಕರಿಸುವ ಪದ್ಧತಿ ಇಲ್ಲಿ ಸರ್ವೇ ಸಾಮಾನ್ಯ. ಆದರೆ ಪಾಟೀಲರು ತಾವೂ ಈಚೆಗೆ ಟೋಪಿ ಧರಿಸುತ್ತಿದ್ದರು. ಇದೀಗ ತಾವೇ ನೇತೃತ್ವ ವಹಿಸಿದ್ದ, ರಾಜಕೀಯವಾಗಿ ಮಹತ್ವದ ಸಮಾರಂಭವಾಗಿದ್ದ ಭಾನುವಾರದ ಆಳಂದ ಸಭೆಯಲ್ಲಿ ಎಲ್ಲರಿಗೂ ಟೋಪಿಯನ್ನೇ ನೀಡುತ್ತ ಗಾಂಧಿ ಟೋಪಿಯ ನೆನಪು ಹಸಿರಾಗುವಂತೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement