ನಮೋ ಭಾಷಣ ಇಂದು ಬಿತ್ತರ
ಗುಲ್ಬರ್ಗ: ಬಿಜೆಪಿ ಪ್ರಧಾನಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರತ ವಿಜಯ ರ್ಯಾಲಿಯಲ್ಲಿ 3ಡಿ ಹಾಲೋಗ್ರಾಮ್ ತಂತ್ರಜ್ಞಾನದ ಮೂಲಕ ಏ.7ರ ಸಂಜೆ 6ರಿಂದ 9ರವರೆಗೆ ಮಾತನಾಡಲಿದ್ದಾರೆ. ಪ್ರಜಾಪ್ರಭುತ್ವ ರಾಜ್ಯಗಳ ಚುನಾವಣಾ ಪ್ರಚಾರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದೇಶದ 100 ನಗರಗಳಲ್ಲಿ ಏಕಕಾಲಕ್ಕೆ ಪ್ರಜೆಗಳನ್ನು ತಲುಪುವ ಉದ್ದೇಶದಿಂದ 3ಡಿ ಹಾಲೋಗ್ರಾಮ್ ತಂತ್ರಜ್ಞಾನದ ಮೂಲಕ ಮಾತನಾಡಲಿದ್ದಾರೆ. ಗುಲ್ಬರ್ಗದಲ್ಲಿ ಗುಡ್ಲಕ್ ಹೋಟೆಲ್ ಎದುರಿಗಿರುವ ಖೂಬಾ ಮೈದಾನದಲ್ಲಿ ನಡೆಯಲಿದೆ.
ಬಿಜೆಪಿ ಬುನಾದಿಯೇ ಕೋಮುವಾದ: ಸಿದ್ದು
ಅಫಜಲ್ಪುರ: ರಾಜ್ಯ ರಾಜಕಾರಣದಲ್ಲಿನ ಸದ್ಯದ ವಿದ್ಯಮಾನಗಳನ್ನು ನೋಡಿದರೆ ಬಿಜೆಪಿ ಬುನಾದಿಯಿಂದಲೂ ಕೋಮುವಾದಿ ತತ್ತ್ವಗಳನ್ನು ಮೈಗೂಡಿಸಿಕೊಂಡಿರುವುದು ಕಂಡು ಬರುತ್ತದೆ. ಬಿಜೆಪಿಯವರು ಬರಿ ಸುಳ್ಳು ಹೇಳಿಕೊಂಡು ಪ್ರಚಾರ ಗಿಟ್ಟಿಸುವವರಾಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಅವರು ಯಾರ ಉದ್ಧಾರಕ್ಕೂ ದುಡಿದಿಲ್ಲ. ಕೇವಲ ಶ್ರೀಮಂತರ, ಬಂಡವಾಳಶಾಹಿಗಳ ಪರವಾಗಿ ಇದ್ದರು. ತಮ್ಮ ಸ್ವಂತ ಹಿತಾಸಕ್ತಿಗಾಗಿ ಇಡೀ ರಾಜಕೀಯವೇ ಹೊಲಸೆಬ್ಬಿಸಿದ ಅಪಕೀರ್ತಿ ಬಿಜೆಪಿಯವರದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು. ಭಾನುವಾರ ಪ್ರಚಾರ ಸಭೆಯಲ್ಲಿ ಖರ್ಗೆ ಪರ ಮತಯಾಚಿಸಿ ಮಾತನಾಡಿದರು.
ಪಾದಯಾತ್ರೆ ಇಂದು
ಅಫಜಲ್ಪುರ: ಗುಲ್ಬರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜಿ ಸಾಗರ ಅಫಜಲ್ಪುರದಲ್ಲಿ ಏ. 7ರಂದು 11 ಗಂಟೆಗೆ ಪಾದಯಾತ್ರೆ ನಡೆಸಲಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಈ ಬಗ್ಗೆ ತಿಳಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ದೇವೆಗೌಡ ತೆಲ್ಲೂರ, ಸುನೀಲ್ ಭಾಗವಾನ್, ಮನೋಹರ ಪೊದ್ದಾರ, ಅಮೃತ ಕಪೂರ, ಸಂತೋಷ ತಳವಾರ ಆಗಮಿಸಲಿದ್ದಾರೆ.
ಎಸ್ಯುಸಿಐ ಸಭೆ ಇಂದು
ಶಹಾಬಾದ್: ಎಸ್ಯುಸಿಐ(ಕಮ್ಯೂನಿಸ್ಟ್) ಪಕ್ಷದಿಂದ ಗುಲ್ಬರ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಸ್.ಎಂ.ಶರ್ಮಾ ಪರ ಮತಯಾಚಿಸಲು ಏ.7ರಂದು ಸಂಜೆ 6 ಗಂಟೆಗೆ ನಗರದ ಲಕ್ಷ್ಮೀಗಂಜ್ನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಕೆ. ಉಮಾ, ಎಚ್.ವಿ. ದಿವಾಕರ್, ರಾಮಣ್ಣ ಇಬ್ರಾಹಿಂಪುರ ಅವರು ಪಕ್ಷದ ಸಿದ್ಧಾಂತ, ರಾಜಕೀಯ ವಿಶ್ಲೇಷಣೆ ಕುರಿತು ಮಾತನಾಡಲಿದ್ದಾರೆ.