'ವಿದ್ಯಾರ್ಥಿ ಸಮುದಾಯ ಮತದಾನ ತಪ್ಪಿಸದಿರಲಿ'
ಗುಲ್ಬರ್ಗ: ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಮತ್ತು ಯುವ ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಂಡು ತಪ್ಪದೇ ಮತ ಚಲಾಯಿಸಬೇಕೆಂದು ಭಾರತ ಚುನಾವಣಾ ಆಯೋಗದ ಸ್ವೀಪ್ ವೀಕ್ಷಕ ರಾಜೀವ್ ಜೈನ್ ಕರೆ ನೀಡಿದರು.
ಭಾನುವಾರ ಗುಲ್ಬರ್ಗ ನಗರದ ಶರಣಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಗೋದುತಾಯಿ ಮಹಿಳಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಆರ್.ಪಿ.ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಾಗರೂಕತೆಯಿಂದ ಮತದಾನ ಮಾಡಿ ಅರ್ಹ ಅಭ್ಯರ್ಥಿ ಆಯ್ಕೆಗೆ ಸಹಕರಿಸಬೇಕು. ಅರ್ಹ ಅಭ್ಯರ್ಥಿಯ ಆಯ್ಕೆಯ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಶರಣಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಪ್ರಾಚಾರ್ಯ ಪ್ರೊ. ಚಂದ್ರಶೇಖರ್ ಅ. ಗದ್ವಾಲ್, ಪ್ರೊ. ಎಸ್.ಎ. ಉಡಚಣ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ. ರಾಧಾಕೃಷ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅರ್ಚನಾ ಎಸ್. ಎಂ., ವಾರ್ತಾಧಿಕಾರಿ ಚಂದ್ರಕಾಂತ್ ಇದ್ದರು.