ಖರ್ಗೆಗೆ ಬಿಎಸ್ಆರ್ ಕಾಂಗ್ರೆಸ್ ಬೆಂಬಲ
ಗುಲ್ಬರ್ಗ: ಹಿಂದುಳಿದ ಹೈ-ಕ ಪ್ರದೇಶದ ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಿಲ್ಲಾ ಬಿಎಸ್ಆರ್ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಬಿಎಸ್ಆರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಲ್ಯಾಣರಾವ ಅಂಬಲಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ಬ್ರಿಟಿಷರ 1844 ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ನಾಲ್ಕು ಪಟ್ಟು ಪರಿಹಾರ, ಒಬ್ಬರಿಗೆ ಉದ್ಯೋಗ ಕಲ್ಪಿಸಿದೆ ಎಂದರು. ಬಿಎಸ್ಆರ್ ಕಾಗ್ರೆಸ್ ಸಂಸ್ಥಾಪಕ ಶ್ರೀರಾಮಲು ಬಿಜೆಪಿ ಸೇರಿದ್ದರೂ, ತಾವು ಜಾತ್ಯತೀತ ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಖರ್ಗೆಗೆ ಬೆಂಬಲಿಸಿದ ಕೋಲಿ ಸಮಾಜ
ಗುರುಮಠಕಲ್: ಮತಕ್ಷೇತ್ರದ ಗಾಂಗಮತ ಕೋಲಿ ಸಮಾಜದ ಪ್ರತಿಯೊಬ್ಬರು ಗುಲ್ಬರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಬಲಿಸಲಿದ್ದಾರೆ ಎಂದು ಮತಕ್ಷೇತ್ರದ ಅಧ್ಯಕ್ಷ ಚುಕ್ಕಪ್ಪ ನಾಯಕ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರು ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸಲು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆಯಾಗಬೇಕಾದರೆ ಮತ್ತೊಮ್ಮೆ ಲೋಕಸಭಾ ಸದಸ್ಯರಾಗಿ ಆಯ್ಕೆ ಮಾಡಬೇಕಿದೆ ಎಂದು ಹೇಳಿದ್ದಾರೆ.