ಪವಿತ್ರ ದರ್ಗಾಗಳಲ್ಲಿ 'ಕೈ' ಸಭೆ: ವಾಲ್ಮೀಕಿ ಆರೋಪ
ಶಹಾಬಾದ್: ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಕಾಂಗ್ರೆಸ್ ರಾಜಕೀಯ ನಡೆಯುತ್ತಿದೆ. ಕೆಲ ಮುಖಂಡರು ದರ್ಗಾಗಳನ್ನು ಕಾಂಗ್ರೆಸ್ ಕಚೇರಿಗಳಂತೆ ಮಾಡಿಕೊಂಡು ಅಲ್ಲಿ ರಾಜಕೀಯ ಚರ್ಚೆ ನಡೆಸುತ್ತಿದ್ದಾರೆಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಆರೋಪಿಸಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಮತಪ್ರಚಾರ ಹಾಗೂ ಗಾಂಧಿ ವೃತ್ತದಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪಟೇಲರ ರಾಜಕೀಯ ನಡೆಯುತ್ತಿದೆ. ಖರ್ಗೆ ಮತ್ತು ಪ್ರಿಯಾಂಕ್ ಸುತ್ತಲೂ ಗಡ್ಡ ಬಿಟ್ಟ ದಡ್ಡ ಪಟೇಲರೇ ತಿರುಗುತ್ತಿದ್ದಾರೆ. ಅಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಸೋಲು ಖಚಿತ: ಮುಸ್ಲಿಂ ಮಹಿಳೆಯರಿಂದ ಬೋಗಸ್ ಮತದಾನ ನಡೆಯುವ ಸಾಧ್ಯತೆ ಇದೆ. ಇದು ಪ್ರಜಾತಂತ್ರ ಆಶಯಕ್ಕೆ ವಿರುದ್ಧವಾಗಿದೆ. ಈ ಬಾರಿ ಚುನಾವಣಾಧಿಕಾರಿಗಳಿಗೆ ಮುಖ ತೋರಿಸದ ಬುರ್ಖಾಧಾರಿ ಮಹಿಳೆಯರಿಗೆ ಮತದಾನ ಮಾಡಲು ಬಿಜೆಪಿ ಬಿಡುವುದಿಲ್ಲ. ದೇಶದ ಭದ್ರತೆ, ಬಡವರ ಬೆವರಿಗೆ ಬೆಲೆ ಮತ್ತು ಮಹಿಳೆಯರ ಸುರಕ್ಷತೆ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಪರ ಮತದಾರರ ಹೆಚ್ಚು ಒಲವು ಕಂಡು ಬರುತ್ತಿದ್ದು, ಈ ಬಾರಿ ಖರ್ಗೆ ಸೋಲು ಖಚಿತ ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ ಮತಯಾಚಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ, ವಾಡಿ ಶಕ್ತಿಕೇಂದ್ರ ಅಧ್ಯಕ್ಷ ಹರಿ ಗಲಾಂಡೆ, ಮುಖಂಡರಾದ ಶಕುಂತಲಾ ಆಚಾರ್ಯ, ನಿವೇದಿತಾ ದಹಿಹಂಡೆ, ರಾಜು ಮುಕ್ಕಣ್ಣ, ಪರುತಪ್ಪ ಕರದಳ್ಳಿ, ಅಶೋಕ ಪವಾರ, ಈರಣ್ಣ ಯಾರಿ, ರಾಜೇಶ ಕಾಂಬಳೆ, ಯಂಕಾರೆಡ್ಡಿಗೌಡ ಯರಗಲ, ಸೈಯದ್ ಪಟೇಲ ಸೈದಾಪುರ, ಸಿದ್ದಣ್ಣ ಕಲಶೆಟ್ಟಿ ಇದ್ದರು. ಬೆಳಮಗಿ ಸಮ್ಮುಖದಲ್ಲಿ ಪಟ್ಟಣದ ದಲಿತ ಯುವ ಮುಖಂಡರಾದ ಆನಂದ ಇಂಗಳಗಿ ಸೇರಿದಂತೆ ಅನೇಕ ಜನ ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದರು.