ಪ್ರತ್ಯೇಕ ಘಟನೆ: 9.72 ಲಕ್ಷ ಮೌಲ್ಯದ ನಗ-ನಾಣ್ಯ ಲೂಟಿ
ಗುಲ್ಬರ್ಗ: ಬೇಸಿಗೆ ಧಗೆ ತಾಳಲಾರದೆ ಮನೆಯ ಮೇಲೆ ಮಲಗಿರುವ ಸಮಯ ಸಾಧಿಸಿದ ಕಳ್ಳರು 6 ಮನೆಯಲ್ಲಿದ್ದ 9.72 ಲಕ್ಷ ಮೌಲ್ಯದ ನಗ-ನಾಣ್ಯ ಲೂಟಿ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಿ ಹಾಗೂ ಸೊನ್ನ ಗ್ರಾಮಗಳಲ್ಲಿ ನಡೆದಿದೆ. ಹಿಪ್ಪರಗಿ ಗ್ರಾಮದ ಬಾಳಪ್ಪ ಸಿದ್ದಪ್ಪ ಕೊಂಡಗುಳಿ, ದೇವೆಂದ್ರಪ್ಪ ಧರ್ಮರಾಯ ಮಡಿವಾಳ, ಕಾಶಿಪತಿ ಶಿವರಾಯ ಬಡಿಗೇರ ಮನೆಯಿಂದ 3.52 ಲಕ್ಷ ಮೌಲ್ಯದ ನಗ- ನಾಣ್ಯ ಹಾಗೂ ಸೊನ್ನ ಗ್ರಾಮದ ರೇವಣಸಿದ್ದಪ್ಪ ಶಾಂತಪ್ಪ ಕಕ್ಕಳ ಮೇಲಿ, ಈರಯ್ಯ ಶಾಂತಯ್ಯ ಅತನೂರಮಠ, ಸಾಹೇಬಗೌಡ ಶಂಕ್ರಪ್ಪ ರೋಣದ ಎನ್ನುವರ ಮನೆಯಿಂದ 6.20 ಲಕ್ಷ ಮೌಲ್ಯದ ನಗ-ನಾಣ್ಯ ಲೂಟಿ ಮಾಡಲಾಗಿದೆ. ಸುದ್ದಿ ತಿಳಿದ ಜೇವರ್ಗಿ ಸಿಪಿಐ ಬಾಸು ಚವ್ಹಾಣ, ನೆಲೋಗಿ ಪಿಎಸ್‌ಐ ಜಗದೀಶ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಹಿಳೆ ಸರ ಕಳವು
ಗುಲ್ಬರ್ಗ: ದೇವಸ್ಥಾನಕ್ಕೆ ಹೊರಟಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಕಳ್ಳ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಆಳಂದ ರಸ್ತೆಯ ಮಾಧವಾನಂದ ನಗರದ ಬಸಮ್ಮ ಅಣ್ಣಪ್ಪ ಚೋರಗಸ್ತಿ ಎಂಬುವವರು ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಳ್ಳ ಕೊರಳಲಿದ್ದ 30 ಸಾವಿರ ಮೌಲ್ಯದ 12 ಗ್ರಾಂ. ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
29 ಗ್ರಾಂ. ಸರಗಳ್ಳತನ
ಗುಲ್ಬರ್ಗ: ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 29 ಗ್ರಾಂ. ಚಿನ್ನದ ಸರ ಕಿತ್ತುಕೊಂಡ ಹೋದ ಘಟನೆ ನಗರದ ಸೇಡಂ ರಸ್ತೆಯ ಓಂ ನಗರ ಗೇಟ್ ಬಳಿ ನಡೆದಿದೆ. ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ವ್ಯಕ್ತಿ ಬಂಧನ
ಗುಲ್ಬರ್ಗ: ನಗರದ ಕೇಂದ್ರ ಬಸ್ ನಿಲ್ದಾಣ ಎದುರಿನ ಹೋಟೆಲ್ ಹತ್ತಿರ ಮಟ್ಕಾ ಬರೆದುಕೊಳ್ಳುತಿದ್ದ ಅಕ್ಕಲಕೋಟೆ ತಾಲೂಕಿನ ಧುದನಿಯ ಮಹಿಬೂಬ್ ವಜೀರಸಾಬ ನದಾಫ್ ಎಂಬಾತನನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಶರಣಪ್ಪ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. 3,100 ನಗದು ಜಪ್ತಿ ಮಾಡಿದ್ದಾರೆ.