'ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ'
ಜೇವರ್ಗಿ: ಪ್ರಸಕ್ತ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತಿಯ ರಂಗ ಅಧಿಕಾರಕ್ಕೆ ಬರಲಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ರಾಜ್ಯದ ಜನತೆ ಜೆಡಿಎಸ್ಗೆ ಬೆಂಬಲಿಸಲಿದ್ದಾರೆ ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜಿ. ಸಾಗರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಡಳಿತದಲ್ಲಿ ಬದಲಾಣೆ ಬಂದಾಗ ಮಾತ್ರ ಜನತೆ ಜೀವನಮಟ್ಟ ಸುಧಾರಿಸಲು ಸಾಧ್ಯ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಗ್ರಾಮೀಣ ಪ್ರದೇಶದಲ್ಲಿನ ಮತದಾರರು ಜೆಡಿಎಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಅವಿರತವಾಗಿ ಹೋರಾಟ: ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ನೋಂದವರ ಧ್ವನಿಯಾಗಿರುವ ಡಿ.ಜಿ. ಸಾಗರ ಅವರು ಕಳೆದ 30 ವರ್ಷಗಳಿಂದ ಶೋಷಿತರು, ಕೃಷಿ ಕೂಲಿಕಾರರು, ನೋಂದವರು, ದಲಿತರ ಧ್ವನಿಯಾಗಿ ರಾಜ್ಯದಲ್ಲಿ ಅವಿರತವಾಗಿ ಹೋರಾಟ ನಡೆಸುತ್ತಿದ್ದಾರೆ. ಜಾತ್ಯತೀತ ನಿಲುವು ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಸಾಗರ ಅವರನ್ನು ತಾಲೂಕಿನ ಮತದಾರರು ಬೆಂಬಲಿಸಲಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಮತಯಾಚನೆ ಮಾಡಬೇಕೆಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಹಿರಿಯ ಉಪಾಧ್ಯಕ್ಷ ಅರ್ಜುನ ಕಪೂರ್, ಮಹಾ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ದ್ಯಾಮಗೊಂಡ, ಎಸ್.ಕೆ. ಹೇರೂರ, ಶಂಕರ ಕಟ್ಟಿಸಂಗಾವಿ, ಭೀಮರಾಯ ಜನಿವಾರ, ಪ್ರಕಾಶ ಪಾಟೀಲ್, ಚಂದ್ರಶೇಖರ ಇದ್ದರು.