ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜಕಾರಣಿಗಳೇ, ಅಭಿವೃದ್ಧಿ ಅಂದ್ರೆ ಇದೇನಾ?

Mainashree
Updated On : 11 Apr 2014, 11:50 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.10
ಈ ಬಾರಿಯ ಲೋಕ ಸಮರದಲ್ಲಿ ಅಭಿವೃದ್ಧಿ ವಿಚಾರ ಗುಲ್ಬರ್ಗ ಸೇರಿದಂತೆ ಹೈ-ಕ ನೆಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೆಷ್ಟರ ಮಟ್ಟಿಗೆ ಅಂದರೆ ರಾಜಕಾರಣಿಗಳು ಮತ ಬೇಟೆ ಸಂದರ್ಭದಲ್ಲಿ ಮಾಡುತ್ತಿರುವ ಅಭಿವೃದ್ಧಿ ವ್ಯಾಖ್ಯಾನ ಆ ಪದದ  ನಿಜ- ನೈಜ ಅರ್ಥವನ್ನೇ ಪ್ರಶ್ನಿಸುತ್ತಿದೆ.
  ಅಖಾಡದಲ್ಲಿರುವ ಹುರಿಯಾಳುಗಳು ಹಿಂದೆ ತಾವು ಪ್ರತಿನಿಧಿಸುತ್ತಿದ್ದ ಖಾತೆಗಳಿಗೆ ಸಂಬಂಧಿಸಿದಂತೆ ತವರು ಕ್ಷೇತ್ರಕ್ಕೆ ತಂದ ಕೆಲ ಯೋಜನೆಗಳನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ಅಭಿವೃದ್ಧಿ ಅಲ್ಲ ಎಂದು ಹೇಳಲಾಗದು. ಆದರೆ ಮೂಲತಃ ಅಭಿವೃದ್ಧಿ ವ್ಯಾಖ್ಯೆ ಏನು ಎಂಬುದೇ ಮೂಲಭೂತ ಪ್ರಶ್ನೆ.
  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ ಕಂಡಿರುವ ಹೈ-ಕ ಪಂಚ ಜಿಲ್ಲೆಗಳಲ್ಲಿ ಆಗಿರುವ ಅಭಿವೃದ್ಧಿ ಎಂತಹದ್ದು, ಜಿಲ್ಲೆಯ ಜನ ಬಯಸಿದ್ದೇನು, ಜನನಾಯಕರು ಕೊಟ್ಟಿದ್ದೇನು, ಜನರ ಬೇಕು- ಬೇಡಗಳಿಗೆ ತಕ್ಕಂತೆ ನಾಯಕರು ಸ್ಪಂದಿಸಿದ್ದಾರೆಯೇ... ಇವೆಲ್ಲವೂ ಇಂದು ಮತದಾರರ ಸಮೂಹದಲ್ಲಿ ಚರ್ಚೆಯಾಗುತ್ತಿರುವ ಸಂಗತಿಗಳು.
  ಬಿಜಲಿ- ಸಡಕ್- ಪಾನಿ ಎಲ್ಲಿ?
ಒಂದು ಪ್ರದೇಶ ಪ್ರಗತಿಯಾಗಿದೆ ಎಂದರೆ ಆ ಕ್ಷೇತ್ರದಲ್ಲಿ ವಾಸವಾಗಿರುವ ಕಟ್ಟಕಡೆಯ ಹಳ್ಳಿಯ ನಿವಾಸಿಗಳೂ ಬಿಜಲಿ, ಸಡಕ್, ಪಾನಿಗಾಗಿ ಪರದಾಡಬಾರದು. ಇವೆಲ್ಲವೂ ಯಥೇಚ್ಛವಾಗಿ ಅಲ್ಲದೇ ಹೋದರೂ ಅಗತ್ಯವಿರುವಷ್ಟಾದರೂ ಅವರಿಗೆ ದೊರಕುತ್ತಿರಬೇಕು. ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ, ಸ್ವಯಂ ಉದ್ಯೋಗ, ಸ್ಥಳೀಯ ಕಲೆ- ಕೌಶಲ್ಯಗಳ ಪಾಲನೆ- ಪೋಷಣೆಯಂತಹ ಹಲವು ರಂಗಗಳಲ್ಲಿ ಆಗಿರುವ ಕೆಲಸಗಳೇ ಆಯಾ ಪ್ರದೇಶದ ಪ್ರಗತಿ ಸೂಚ್ಯಂಕಗಳು.
  ಹಾಗಾದ್ರೆ ಈ ಸೂಚ್ಯಂಕಗಳಂತೆಯೇ ಹೈ.ಕ.ದಲ್ಲಿ ಪ್ರಗತಿ ಪೈರು ಬಂದಿದೆಯೇ ಎಂಬುದು ಈಗಿನ ಪ್ರಶ್ನೆ. ಚಿಕಿತ್ಸಾ ದೃಷ್ಟಿಕೋನದೊಂದಿಗೆ ಹೈ-ಕ ನೆಲದ ಈಚೆಗಿನ ದಶಕದ ಆಗು ಹೋಗು ಸೂಕ್ಷ್ಮವಾಗಿ ಅವಲೋಕಿಸಿದವರೆ ಹೈ- ಕ ಪ್ರಗತಿ ನೋಟದಲ್ಲಿ ಸ್ಪಷ್ಟತೆಗಿಂತ ಅಸ್ಪಷ್ಟತೆಯೇ ಢಾಳಾಗಿ ಕಾಣುತ್ತಿರುವುದು ದುರಂತ.
  2005, 2011ರ ಮಾನವ ಅಭಿವೃದ್ಧಿ ಸೂಚ್ಯಂಕ ಗಮನಿಸಿದರೆ ಈ ಭಾಗ ಕೆಳಗಡೆಯಿಂದಲೇ ರ್ಯಾಂಕ್‌ಗಾಗಿ ಪೈಪೋಟಿಯಲ್ಲಿರೋದು ಗಮನಾರ್ಹ. ಡಾ. ನಂಜುಂಡಪ್ಪ ಅವರಂತೂ ಈ ಭಾಗದ ಎಲ್ಲರ ಮುಖಕ್ಕೆ ಹೊಡೆದಂತೆ 1972ರಲ್ಲಿ ಈ ಭಾಗ ಎಲ್ಲಿತ್ತೋ, 2001-02ರಲ್ಲಿಯೂ ಅಲ್ಲೇ ಇದೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದು ಇಲ್ಲಿ ಸ್ಮರಣಾರ್ಹ. 2001-02ರಿಂದ 2013- 14ರ ಚಾಲ್ತಿ ಸಂದರ್ಭದವರೆಗೂ ಈ ಪ್ರದೇಶದ ಮೂಲ ಸೌಕರ್ಯ ವಿಚಾರದಲ್ಲಿ ಪ್ರಗತಿಯಾಗಿದ್ದು ಅಷ್ಟಕ್ಕಷ್ಟೆ. ಹಾಗಾದರೆ ಇಂದು ಅಭಿವೃದ್ಧಿ ಮಂತ್ರ ಪಠಣ ಮಾಡುತ್ತ ಮತ ಕೇಳಲು ಬರುವವರು ಮಾಡಿದ ಸಾಧನೆಯೇನು?
   ಇದಕ್ಕೆಲ್ಲಾ ಯಾರು ಹೊಣೆ?
ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳ 1.25 ಕೋಟಿ ಜನತೆ ಕಳೆದೈದು ದಶಕದಿಂದ ಅನುಭವಿಸುತ್ತಿರುವ ಇಂತಹ ಹೈರಾಣಗಳಿಗೆ ಯಾರು ಹೊಣೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
 ಇಲ್ಲಿನ ತಾಲೂಕುಗಳು 50 ವರ್ಷಗಳ ಹಿಂದೆ ಹೇಗಿದ್ದವೋ ಹಾಗೇ ಇವೆ. ಹಿಂದುಳಿದಿರುವಿಕೆ ಇಲ್ಲಿ ಕಾಯಂ ತಳ ಊರಲು ಯಾರು ಕಾರಣ?
 ಮೂರ್ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದು ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನೇ ಹೊಂದಿದ್ದರೂ ರಸ್ತೆ, ಕುಡಿವ ನೀರು, ಆರೋಗ್ಯ ಸೇವೆ, ಶಿಕ್ಷಣ, ಸಾರಿಗೆ ಸಂಪರ್ಕ, ನೀರಾವರಿ... ಯೋಜನೆಗಳು ಹೈ- ಕ ಭಾಗದಲ್ಲಿ ಅಗತ್ಯಕ್ಕೆ ತಕ್ಕಂತೆ ಬರಲೇ ಇಲ್ಲ ಯಾಕೆ?
 ಕಳಪೆ ಕಾಮಗಾರಿ ಇಲ್ಲಿನ ಎಲ್ಲ ಯೋಜನೆಗಳನ್ನು ನುಂಗಿ ನೀರು ಕುಡಿಯುತ್ತಿರುವುದ್ಯಾಕೆ ಕಳಪೆ ಕಾಮಗಾರಿಗೆ ಕಡಿವಾಣವೇ ಬೀಳುತ್ತಿಲ್ಲವೇಕೆ?
 ಅಧಿಕಾರಿ- ಗುತ್ತಿಗೆದಾರ- ರಾಜಕಾರಣಿ ಅಪವಿತ್ರ ಮೈತ್ರಿ ಹೈ.ಕ.ದಲ್ಲಿ ಬಲು ಗಟ್ಟಿ. ಆಡಳಿತಾರೂಢರ ಮೇಲೆ ಈ ಲಾಭಿ ಪ್ರಭಾವ ಬೀರುತ್ತಿರುವುದರಿಂದ ಹಿಂದುಳಿದ ನೆಲ ಹಾಗೇ ಕುಸಿಯಲು ಕಾರಣ. ಇಲ್ಲಿಗೆ ಬರುವ ಪ್ರಗತಿ ಯೋಜನೆಗಳ ಅನುದಾನ ಇವರೇ ಲೂಟಿ ಹೊಡೆದು ಬಿಡುತ್ತಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
 ಹೈ.ಕ. ಭಾಗವನ್ನು ಸರ್ಕಾರದಲ್ಲಿ ಪ್ರತಿನಿಧಿಸುವ ಮಂತ್ರಿ ಮಹೋದಯರು ಹೈದ್ರಾಬಾದ್ ಮೂಲಕ ವಿಮಾನದಲ್ಲೋ, ರೈಲಿನಲ್ಲೋ ಬೆಂಗಳೂರು, ದೆಹಲಿ ತಲುಪುತ್ತಾರೆ. ಹೀಗಿರುವಾಗ ಈ ಭಾಗದಲ್ಲಿನ ಹದಗೆಟ್ಟ ರಸ್ತೆ, ಹರಿದು ಹೋದ ಜನರ ಬದುಕು ಜನನಾಯಕರ ಗಮನಕ್ಕೆ ಬರುವುದುಂಟೆ ಎಂದು ಇಲ್ಲಿನ ಜನರೇ ಆಡಿಕೊಳ್ಳುತ್ತಿದ್ದಾರೆ.
ನೀವು ಮಾಡಿದ ಪ್ರಗತಿ ಅಂದ್ರೆ ಹೀಗೇನಾ?
1. ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹೈ-ಕ ಭಾಗದ್ದೇ ಸಿಂಹಪಾಲು. ಇಲ್ಲಿರುವ ಎಲ್ಲ 33 ತಾಲೂಕುಗಳು ಮೋಸ್ಟ್ ಬ್ಯಾಕ್ವರ್ಡ್.
2. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಈಶಾನ್ಯ 7 ಜಿಲ್ಲೆಗಳದ್ದು ಮೇಲುಗೈ, ಇದರಲ್ಲಿ ಹೈ-ಕ ಪಂಚ ಜಿಲ್ಲೆಗಳದ್ದೇ ಜೋರು.
3. ನವಜಾತ ಶಿಶುಗಳ ಸಾವಿನ ಪ್ರಮಾಣ ಹೈ-ಕ ನೆಲದಲ್ಲೇ ಅಧಿಕ.
4. ಬಾಣಂತಿಯರ ಸಾವಿನ ಪ್ರಮಾಣದಲ್ಲಿಯೂ ಹೈ- ಕ ಮುಂದೆ.
5. ಉದ್ಯೋಗ ಖಾತ್ರಿ ಯೋಜನೆ ಹಗರಣದ ಸದ್ದು ಜೋರಾಗಿದ್ದು ರಾಜ್ಯದಲ್ಲೇ ಹೈ-ಕ ನೆಲ ಪ್ರಥಮ.
6. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಇಂದಿಗೂ ಸಂಪರ್ಕ ರಸ್ತೆ ಇಲ್ಲ, ಜನತೆ ಇಂದಿಗೂ ಬಸ್ಸಿನ ಮುಖ ಕಂಡಿಲ್ಲ.
7. ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಆರ್ಸೆನಿಕ್, ಫ್ಲೋರೈಡ್‌ಯಕ್ತ ನೀರು ಸೇವಿಸಿ ತಿಕ್ಕಿಮುಕ್ಕಿದ ರೋಗಗಳು.
8. ಪ್ರತಿ ಬೇಸಿಗೆಯಲ್ಲಿ ನೀರಿನ ಹಾಹಾಕಾರ, ಸಮಸ್ಯಾತ್ಮಕ ಹಳ್ಳಿಗಳ ಸಂಖ್ಯೆ ಕರಗೋದೇ ಇಲ್ಲ.
9. ಕುಡಿವ ಶುದ್ಧ ನೀರು ಪೂರೈಸುವಲ್ಲಿ ಈ ಭಾಗದಲ್ಲಿನ ಕಳಪೆ ಸಾಧನೆ ರಾಜ್ಯಕ್ಕೇ ಕಪ್ಪುಚುಕ್ಕೆ.
10. ಗ್ರಾಮೀಣ ಕುಡಿವ ನೀರು ಯೋಜನೆಯಲ್ಲಿ ಗುಲ್ಬರ್ಗದ ಹಗರಣ ಹೆಸರುವಾಸಿ, ಜನ ಹಗರಣ ಸದ್ದು ಆಲಿಸಿದರೇ ಹೊರತು ಬಾಯಾರಿಕೆ ಇಂಗಲಿಲ್ಲ.
11. ಬರಗಾಲ ನೀಗಿಸಿ ಹಸಿರು ಚಿಗುರಿಸಬೇಕಿದ್ದ ಬೆಣ್ಣೆತೊರಾ, ಅಮರ್ಜಾ, ಭೀಮಾ, ಜುರಾಲಾ, ಮುಲ್ಲಾಮಾರಿ, ಮಾಂಜ್ರಾ ಯೋಜನೆಗಳು ರೈತರಿಗೆ ಗಗನ ಕುಸುಮ.
12. ಮಹಾರಾಷ್ಟ್ರದವರ ಸಂಚುಗಾರಿಕೆಯಿಂದ ಭೀಮಾ ಬತ್ತಿ ಹೋದರೂ ರಾಜಕಾರಣಿಗಿದು ಗೊತ್ತೇ ಇಲ್ಲ.
13. ಗುಲ್ಬರ್ಗದ 6 ಲಕ್ಷ ಜನ ನಿತ್ಯ ಒಳಚರಂಡಿ ಗಲೀಜು ನೀರನ್ನೇ ಕುಡಿಯುತ್ತಿದ್ದರೂ ಕೇಳುವವರಿಲ್ಲ.
14. ನಗರ ಕೊಚ್ಚೆ ನೀರೆಲ್ಲವೂ ಭೀಮಾನದಿ ಸೇರುತ್ತಿದ್ದರೂ ಅದಕ್ಕೆ ಪರಿಹಾರ ಹುಡುಕುವವರು ಇಲ್ಲಿಲ್ಲ.
15. ಭೀಮಾ ನದಿ ನೀರಲ್ಲಿ ವೈರಾಣುಗಳಿವೆ, ಕಾಮಾಲೆಗೆ ಅದೇ ಕಾರಣವೆಂದು ತಜ್ಞರೇಳಿದ್ದರೂ ಅದು ಲೆಕ್ಕಕ್ಕಿಲ್ಲ.
16. ಗುಲ್ಬರ್ಗ ವಿಮಾನ ನಿಲ್ದಾಣ ಯೋಜನೆಯ ಗುತ್ತಿಗೆದಾರರು ಕಾಮಗಾರಿಗೆ ಎಳ್ಳುನೀರು ಬಿಟ್ಟರೂ ಯಾಕೆ ಹೀಗೆಂದು ಕೇಳುವ ಎದೆಗಾರಿಕೆಯನ್ನು ಇಲ್ಲಿನವರು ಪ್ರದರ್ಶಿಸಲಿಲ್ಲ.
17. ರಾಜ್ಯ- ಕೇಂದ್ರದಲ್ಲಿ ಪ್ರಭಾವಿ ಸಚಿವರಿದ್ದರೂ ಹೈ-ಕ ಜಿಲ್ಲೆಗಳಲ್ಲಿರುವ ರಸ್ತೆಗಳ ಉದ್ದಕ್ಕೂ ಅಜಗಜಾಂತರ, ರಸ್ತೆಗಳು ಹರಿದು ಹೋದರೂ ಕೇಳುವವರಿಲ್ಲ.
18. ಮೂಲ ಸೌಕರ್ಯಕ್ಕೆಂದು ಸಿಎಂ ನಗರೋತ್ಥಾನ ಯೋಜನೆಯಡಿ ಬಂದ 200 ಕೋಟಿಯಲ್ಲಿನ ಕಾಮಗಾರಿಗಳು ಮೇಲೆದ್ದಿಲ್ಲ.
19. ಎಚ್ಕೆಡಿಬಿ, ಎಚ್ಕೆಆರ್‌ಡಿಬಿ, ನಂಜುಂಡಪ್ಪ ಸಮಿತಿ ಎಂದು ಸಾವಿರಾರು ಕೋಟಿ ಹಣ ಹರಿದರೂ ಪ್ರಗತಿ ಆರಕ್ಕೇರಿಲ್ಲ.
20. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಹೈ-ಕ ಜಿಲ್ಲೆಗಳು ಕೊನೆಯಿಂದ ರ್ಯಾಂಕ್‌ಗಾಗಿ ಪೈಪೋಟಿ ಮಾಮೂಲು.
21. ಜನ- ಜಾನುವಾರು ಆಸ್ಪೆತ್ರೆಗಳಲ್ಲಿ ವೈದ್ಯರಿಗೆ ಬರ ನೆಗಡಿ ಬಂದರೂ ಜಿಲ್ಲಾ- ತಾಲೂಕು ಕೇಂದ್ರ, ಅಥವಾ ಪಕ್ಕದ ಸೊಲ್ಲಾಪುರ, ಹೈದ್ರಾಬಾದೇ ಗತಿ
22. ರಾಯಚೂರು ಜಿಲ್ಲೆ ದೇವದುರ್ಗದಲ್ಲಿನ ಮಕ್ಕಳ ಅಪೌಷ್ಟಿಕತೆ ರಾಷ್ಟ್ರದ ಗಮನ ಸೆಳೆದ ವಿದ್ಯಮಾನವಾದರೂ ಇಂದಿಗೂ ಆ ಕೂರತೆ ನೀಗಿಸುವ ಕ್ರಮಗಳಿಲ್ಲ.
23. ಜನ ಬೇಡೋದೇನ್ರಿ, ಕುಳಿಮುಕ್ತ ರಸ್ತೆ, ಇದು ಕನಸು.
24. ತೊಗರಿ ಬೆಂಬಲ ಬೆಲೆ ವಿಚಾರ ರೈತರಿಗೆ ತೃಪ್ತಿಯಾಗುಂತೆ ಪರಿಹಾರ ಕಂಡಿಲ್ಲ ಯಾಕೆ?
25. ಜಿಲ್ಲಾ ಕೇಂದ್ರದಿಂದ ತಾಲೂಕು- ಹೋಬಳಿ ಸಂಪರ್ಕ ರಸ್ತೆಗಳು ಹರಿದು ಹೋದರೂ ಬುಟ್ಟಿ ಮಣ್ಣೂ ಹಾಕುವವರಿಲ್ಲ.
26. ಕೆಡಿಪಿ ಸಭೆಗಳೇ ನಡೆಯೋದಿಲ್ಲ ಅಂದ್ರೆ ಪ್ರಗತಿ ಪರ್ವದ ಪರಿಶೀಲನೆ ಹೇಗಾದೀತು?
27. ಜೆಸ್ಕಾಂ ಕಂಪನಿ ಹೈ.ಕ.ಕ್ಕೇ ಮೀಸಲಾಗಿದ್ದರೂ ಇಂದಿಗೂ ತಡೆರಹಿತ ವಿದ್ಯುತ್ ಇಲ್ಲಿ ಕನಸು.
28. ಪಾಲಿಕೆ, ನಗರಸಭೆ, ಪುರಸಭೆಗಳು ಜನರ ನಾಡಿಮಿಡಿತ ಅರಿಯದಿದ್ದರೂ ಕೇಳುವ ಧೈರ್ಯ ಯಾರಿಗೂ ಇಲ್ಲ.

ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement