ವೋಡಾಫೋನ್ ಕನ್ನಡ ವಿರೋಧಿಗೆ ಖಂಡನೆ
ಲಿಂಗಸ್ಗೂರು: ರಾಜ್ಯದ ಜನತೆಯ ಹಣ, ವ್ಯಾಪರ ವೋಡಾಫೋನ್ ಕಂಪನಿಗೆ ಬೇಕು. ಆದರೆ ಕಂಪನಿ ನಾಮಫಲಕಗಳಲ್ಲಿ ಕನ್ನಡ ಭಾಷೆ ಮಾತ್ರ ಬೇಡವೆಂಬ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೋಡಾಫೋನ್ ಕಂಪನಿಗೆ ಪತ್ರ ಬರೆಯುವ ಮೂಲಕ ಶುಕ್ರವಾರ ಅಂಚೆ ಪೆಟ್ಟಿಗೆಯಲ್ಲಿ ಪತ್ರ ಹಾಕಿ ಪತ್ರ ಚಳವಳಿ ನಡೆಸಿದರು.
ಕನ್ನಡ ಭಾಷೆ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿದೆ. ಸರ್ಕಾರ 2008ರಲ್ಲಿ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಎಲ್ಲ ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು. ಬೇರೆ ಭಾಷೆಗಿಂತ ಕನ್ನಡ ಭಾಷೆ ದೊಡ್ಡದಾಗಿ ಮುದ್ರಿಸಬೇಕೆಂಬ ನಿಯಮ ರೂಪಿಸಿತ್ತು. ಆದರೆ ವೋಡಾಫೋನ್ ಕಂಪನಿ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ ಪ್ರಯುಕ್ತ ನ್ಯಾಯಾಲಯ ಈ ನಿಯಮ ಸಂವಿಧಾನದ ವಿರುದ್ಧ ಎಂದು ತೀರ್ಪು ನೀಡಿದೆ. ಇದರಿಂದ ಕನ್ನಡಿಗರ ಮತ್ತು ಕರ್ನಾಟಕ ಸ್ವಾಭಿಮಾನಕ್ಕೆ ಪೆಟ್ಟು ನೀಡಿದಂತಾಗಿದೆ.
ನೆರೆ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಯಾ ಭಾಷೆಯನ್ನು ಪ್ರಧಾನವಾಗಿ ಅಂಗಡಿ ಮುಂಗಟ್ಟು, ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಬಳಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಕೋಟ್ಯಾಂತರ ರೂ. ವ್ಯಾಪಾರ ವಹಿವಾಟು ನಡೆಸುವ ವೋಡಾಫೋನ್ ಮೊಬೈಲ್ ಕಂಪನಿ ಕನ್ನಡ ಬಳಸುತ್ತಿಲ್ಲ. ಸರ್ಕಾರದ ನಿಯಮ ಸರಿಯಿಲ್ಲವೆಂದು ಉಚ್ಛನ್ಯಾಯಾಲಯಕ್ಕೆ ದೂರು ದಾಖಲಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಒಂದು ವೇಳೆ ಕಂಪನಿ ಕನ್ನಡ ವಿರೋಧಿ ನಿಲುವು ಬದಲಿಸದಿದ್ದರೆ ಸದರಿ ಕಂಪನಿ ಜಾಲ ಬಳಸದೆ ಬೇರೆ ಕಂಪನಿಯ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.
ಜಿಲಾನಿ ಪಾಶಾ, ಶಿವರಾಜ ನಾಯಕ, ಆಂಜನೇಯ ಭಂಡಾರಿ, ಅಮರೇಶ ನಾಯಕ, ರಾಘವೇಂದ್ರ ಭಜಂತ್ರಿ, ಜೀಲಾನಿ ಪಾಶಾ, ಚೇತನ್, ಕುಮಾರ್, ಯಲ್ಲಪ್ಪ ಬಂಡಿ, ಹನುಮಂತ, ರವಿಕುಮಾರ, ಜಾಕೀರ ಹುಸೇನ, ನಿತಿನ್ ಇದ್ದರು.