ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಬಿಜೆಪಿಗಿದೆ: ನಾಯಕ
ಶಹಾಪುರ: ದೇಶಕ್ಕೆ ಒಳ್ಳೆಯ ಆಡಳಿತ ನೀಡುವ ಜತೆಗೆ ಭದ್ರತೆ ಮತ್ತು ಜನಪರ ಸಮಸ್ಯೆಗೆ ಸ್ಪಂದಿಸುವಂಥ ಪಕ್ಷ ಬಿಜೆಪಿಯಾಗಿದ್ದು ಜನತೆ ಸಂಪೂರ್ಣ, ಜನತೆ ಸಂಪೂರ್ಣ ಮನಸ್ಸಿನಿಂದ ಬೆಂಬಲಿಸಲಿದ್ದಾರೆ ಎಂದು ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ತಿಳಿಸಿದರು.
ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಕೇವಲ ಬಿಜೆಪಿ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತ ಮತಗಳಿಸುವ ತಂತ್ರ ಅನುಸರಿಸುತ್ತಿದೆ. ಆದರೆ ಮತದಾರರು ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು ಎಂಬ ಉದ್ದೇಶ ಹೊಂದಿದ್ದು ಜನರನ್ನು ವಂಚಿಸುವ ಕಾಂಗ್ರೆಸಿಗೆ ತಕ್ಕ ಪಾಠವನ್ನು ಚುನಾವಣೆಯಲ್ಲಿ ಕಲಿಸಲಿದ್ದಾರೆ ಎಂದರು. ಪಟ್ಟಣದಲ್ಲಿ ಶಾಸಕ ಗುರುಪಾಟೀಲ ಅವರ ಬೆಂಬಲ ಅಭೂತಪೂರ್ವವಾಗಿ ಸಿಕ್ಕಿದ್ದು ಸಮಸ್ತ ಕಾರ್ಯಕರ್ತರು, ಹಿರಿಯ ಮುಖಂಡರು ಸಾರ್ಥಕ ಶ್ರಮವಹಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಶಾಸಕ ಗುರುಪಾಟೀಲ ಶಿರವಾಳ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಜನತೆ ಬದಲಾವಣೆ ಬಯಸಿ ಪ್ರಸಕ್ತ ಬಿಜೆಪಿಗೆ ಮನ್ನಣೆ ನೀಡುತ್ತಿರುವುದೇ ಸಾಕ್ಷಿ. ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರ ಕಾಳಜಿ, ಉದ್ಯೋಗಸೃಷ್ಟಿ, ಯಾವುದಕ್ಕೂ ಕಾಂಗ್ರೆಸ್ ಸ್ಪಂದಿಸಲಿಲ್ಲ ಎಂದರು.
ಪಟ್ಟಣದ ಹೊಸ ಬಸ್‌ನಿಲ್ದಾಣ, ಹಳಿಪೇಟೆ, ಬಸವೇಶ್ವರಚೌಕ್, ಗ್ಯಾರೇಜ್ ಲೈನ್, ಮೋಚಿಗಡ್ಡ ಸೇರಿದಂತೆ ಸಿ.ಬಿ. ಕಮಾನದವರೆಗೂ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ಮಲ್ಲಣ್ಣ ಮಡ್ಡಿ, ಡಾ. ಮಲ್ಲಣಗೌಡ ಉಕ್ಕಿನಾಳ, ಶಂಕ್ರಣ್ಣ ವಣಿಕ್ಯಾಳ, ಡಾ.ಚಂದ್ರಶೇಖರ ಸುಬೇದಾರ, ಮಾಜಿ. ಎಂಎಲ್‌ಸಿ ಅಮಾತೆಪ್ಪ ಕಂದಕೂರ ಮುಂತಾದವರು ಪಾಲ್ಗೊಂಡಿದ್ದರು.