ಖರ್ಗೆ ಕಾಲ್ನಡಿಗೆ, ಮೋದಿ ತ್ರೀಡಿ ಮೋಡಿ
ಕ.ಪ್ರ. ವಾರ್ತೆ, ಗುಲ್ಬರ್ಗ, ಏ.12
ಕಾಂಗ್ರೆಸ್ ಹಾಗೂ ಬಿಜೆಪಿ ಲೋಕ ಸಮರದ ಪ್ರಚಾರ ಪರಾಕಾಷ್ಠೆ ಹಂತ ಮುಟ್ಟಿತ್ತು. ಪುನರಾಯ್ಕೆ ಬಯಸಿರುವ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬೆಳಗ್ಗೆ 8 ಗಂಟೆಯಿಂದಲೇ ಗುಲ್ಬರ್ಗದ ಹತ್ತು ಹಲವು ಬಡಾವಣೆಗಳಲ್ಲಿ ಕಾಲ್ನಡಿಗೆ ಮೂಲಕ ಮತದಾರರ ಮನೆ ಸುತ್ತುತ್ತ ಅವರ ಮನದಾಳಕ್ಕಿಳಿಯುವ ಪ್ರಯತ್ನದಲ್ಲಿ ತೊಡಗಿದ್ದರೆ ಅತ್ತ ಬಿಜೆಪಿ, ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ತ್ರಿಡಿ ಹಾಲೊಗ್ರಾಮ್ ತಂತ್ರಜ್ಞಾನದ ಭಾಷಣ ಪ್ರಸಾರ ಮಾಡುವ ಮೂಲಕ ಮೋಡಿಯ ಕಸರತ್ತಿನಲ್ಲಿ ಮಗ್ನವಾಗಿತ್ತು.
ಬಿರು ಬಿಸಿಲನ್ನೂ ಲೆಕ್ಕಿಸದೆ ಖರ್ಗೆ ಬಿರುಸಿನ ಪ್ರಚಾರ ನಡೆಸಿದ್ದು ಗಮನಾರ್ಹವಾಗಿತ್ತು. ಸಾಮಾನ್ಯವಾಗಿ ಪಾದಯಾತ್ರೆ ಮಾಡದ ಖರ್ಗೆ ಈ ಚುನಾವಣೆಯಲ್ಲಿ ಮತದಾರರ ಮನೆಮನೆಗೂ ಹೊರಟಿದ್ದಾರೆ. ಖರ್ಗೆ ತಮ್ಮ ಬಡಾವಣೆಗೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಲೇ ಮತದಾರರು ಒಂದಾಗಿ ಅವರನ್ನು ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದ ನೋಟ, ಇಲ್ಲಿನ ಜಾಜಿ ಚಾಳ, ಕೋರ್ಟ್ ಪ್ರದೇಶ, ಬಸವ ನಗರ, ಗಂಗಾನಗರ, ಶಾಸ್ತ್ರೀಚೌಕ, ಮರಗಮ್ಮ ಮಂದಿರ, ಬ್ರಹ್ಮಪುರ, ಶಹಾಬಜಾರ್, ಖಾದ್ರಿ ಚೌಕ್, ಸಿದ್ದೇಶ್ವರ ಕಲ್ಯಾಣ ಮಂಟಪ ಪ್ರದೇಶ, ರಾಜಾಪುರ ಬಡಾವಣೆಗಳಲ್ಲಿ ಕಂಡು ಬಂದಿತು.
ಮುಖಂಡರ ಸಭೆ: ಹೋರಾಟಗಾರ ವೈಜನಾಥ ಪಾಟೀಲ್, ಸಚಿವ ಖಮರುಲ್ ಇಸ್ಲಾಂ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಸೇರಿದಂತೆ ಅನೇಕ ಪ್ರಮುಖರು ಈ ಸಭೆಯಲ್ಲಿದ್ದು ಚರ್ಚಿಸಿದರು. ಇದಲ್ಲದೆ ಖರ್ಗೆಯವರೇ ಖುದ್ದು ಪಾದಯಾತ್ರೆಗಳಲ್ಲಿ ಮಹಿಳೆಯರನ್ನು ಬಹುವಾಗಿ ಭೇಟಿ ಮಾಡಿ ತಮ್ಮ ಪರಿಚಯ ಹೇಳಿಕೊಂಡು ಸರಳವಾಗಿ ಹಾಗೂ ತಮ್ಮದೇ ಆದ ಶೈಲಿಯಲ್ಲಿ ಮತ ಕೇಳಿದ್ದು ಜತೆಗಿದ್ದವರನ್ನು ದಂಗು ಬಡಿಸಿತ್ತು. ಖರ್ಗೆಯವರು ಎಂದರೆ ಖಡಕ್ ಇದ್ದಾರೆ, ನೇರ-ನಡೆ ನುಡಿಯವರು ಎಂದು ಅರಿತಿದ್ದ ಕಾರ್ಯಕರ್ತರು ಅವರ ಜನಪರ ನಿಲುವು, ಸರಳ ಮಾತುಕತೆಗೆ ದಂಗಾಗಿದ್ದರು.
ಗುಲ್ಬರ್ಗ ಉತ್ತರ ಹಾಗೂ ಗುಲ್ಬರ್ಗ ದಕ್ಷಿಣ, ಎರಡೂ ಅಸೆಂಬ್ಲಿಗಳಲ್ಲಿ ಖರ್ಗೆ ಶುಕ್ರವಾರ ನಡೆಸಿದ ಬಿರುಸಿನ ಕಾಲ್ನಡಿಗೆ ಯಾತ್ರೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜನತೆ ಖರ್ಗೆ ಕಂಡು ಸಂತಸದಿಂದ ಮಾತುಕತೆ ನಡೆಸಿದ್ದಾರಲ್ಲದೆ ಅನೇಕ ಸವಲತ್ತು ತಂದುಕೊಟ್ಟವರು ಎಂದು ಬಹುವಾಗಿ ಶ್ಲಾಘಿಸಿದ್ದಾರೆ. ಈ ಕಾಲ್ನಡಿಗೆ ಗುಲ್ಬರ್ಗ ದಕ್ಷಿಣೋತ್ತರದಲ್ಲಿ ಕೈ ಅಲೆ ಮೂಡುವಂತೆ ಮಾಡಿದೆ ಎಂದು, ಖರ್ಗೆ ಪಾದಯಾತ್ರೆಗಳಲ್ಲಿದ್ದ ಡಿಸಿಸಿ ಪ್ರ. ಕಾರ್ಯದರ್ಶಿ ಭೀಮರೆಡ್ಡಿ ಪಾಟೀಲ್ 'ಕನ್ನಡಪ್ರಭ' ಜತೆ ಮಾತನಾಡುತ್ತ ಹೇಳಿದ್ದಾರೆ.
ಮೋದಿ ತ್ರೀಡಿ ಮೋಡಿ: ಇಲ್ಲಿನ ಖೂಬಾ ಮೈದಾನದಲ್ಲಿ ಶುಕ್ರವಾರ ಬಿಜೆಪಿ ಮೋದಿಯವರ ಭಾಷಣದ ತ್ರಿಡಿ ಹಾಲೋಗ್ರಾಮ್ ತಂತ್ರಜ್ಞಾನದ ಪ್ರದರ್ಶನದಡಿಯಲ್ಲಿ ಸಾರ್ವಜನಿಕವಾಗಿ ನಡೆಸಿದ ಪ್ರದರ್ಶನ ಜನಮನ ಸೂರೆಗೊಂಡಿತ್ತು. ಶುಕ್ರವಾರ ಸಂಜೆ ಬರೋಬ್ಬರಿ 7 ಗಂಟೆ ಹೊತ್ತಿಗೆ ಶುರುವಾದ ಮೋದಿ ಭಾಷಣ 45 ನಿಮಿಷಗಳ ಕಾಲ ನಡೆಯಿತು. ಮೈದಾನದ ತುಂಬ ಜನ ಸೇರಿದ್ದರು.
ಮೋದಿ ಜನರ ಸಮ್ಮುಖದಲ್ಲೇ ಬಂದು ನಿಂತು ಭಾಷಣ ಮಾಡುತ್ತಿದ್ದಾರೇನೋ ಎಂಬಂತೆ ತಂತ್ರಜ್ಞಾನ ಬಳಸಿ ಮೋದಿಯವರ ಪ್ರತಿಕೃತಿ ತ್ರಿಡಿ ಬಿಂಬದಲ್ಲಿ ಸೃಷ್ಟಿಮಾಡಿ ಪ್ರದರ್ಶಿಸಿದ್ದು ಸೇರಿದ್ದವರನ್ನೆಲ್ಲ ಬೆರಗು ಮಾಡಿತ್ತು.
ಜನತೆ ಮೋದಿ ಭಾಷಣದಲ್ಲಿ ಸ್ಥಳದಲ್ಲೇ ಪ್ರತಿಕ್ರಿಯಿಸುವಂತೆ ಇಲ್ಲಿಯೂ ಮೋದಿ ಮಾತುಗಳಿಗೆಲ್ಲ ಚಪ್ಪಾಳೆ ಹೊಡೆದು, ಜೋರಾಗಿ ಕಿರುಚಿ ತಮ್ಮ ಬೆಂಬಲ ನೀಡುತ್ತಿದ್ದ ನೋಟಗಳು ಭಾಷಣದುದ್ದಕ್ಕೂ ಕಂಡವು. ಮೋದಿ ತ್ರಿಡಿ ಮೋಡಿಯಿಂದಾಗಿ ಈ ಖೂಬಾ ಮೈದಾನದಿಂದ ಸಾಗುವ ಪ್ರಮುಖ ರಸ್ತೆ ಸಂಚಾರಕ್ಕೂ 1 ಗಂಟೆ ಕಾಲ ತೊಂದರೆಯಾಗಿತ್ತು. ಮೋದಿ ತ್ರಿಡಿ ಕಂಡ ವಾಹನಸವಾರರೂ ಸಹ ಅಲ್ಲೇ ನಿಂತು ಮೋದಿ ಮಾತುಗಳಿಗೆ ಕಿವಿಯಾದದ್ದು ವಿಶೇಷವಾಗಿತ್ತು.