ಬಸವರಾಜ ಹರಸೂರ ಬಿಜೆಪಿಗೆ ಸೇರ್ಪಡೆ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಕಂದಕೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಬಸವರಾಜ ಹರಸೂರ ಚಿಂತನಳ್ಳಿ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಶನಿವಾರ ಚಿಂತನಳ್ಳಿ ಗ್ರಾಮಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಪ್ರಚಾರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ವೆಂಕಟರೆಡ್ಡಿ ಮುದ್ನಾಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡ ಮುದ್ನಾಳ, ಈ ಭಾಗದಲ್ಲಿ ಯುವ ನಾಯಕ ಹರಸೂರ ಹಾಗೂ ಅವರ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಪಕ್ಷದ ಸಂಘಟನೆಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು.
ಬಸವರಾಜ ಹರಸೂರ ಮಾತನಾಡಿ, ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಅವರ ಕಾರ್ಯವೈಖರಿಯಿಂದ ನಾವು ಅಸಮಧಾನಗೊಂಡು ಮುದ್ನಾಳರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯೆ ನಾಗರತ್ನ ಕುಪ್ಪಿ ಮಾತನಾಡಿ, ಬೆಳಮಗಿ ಪರ ಮತಯಾಚಿಸಿದರು. ಸಮಾರಂಭದಲ್ಲಿ ಬ್ಲಾಕ್ ಬಿಜೆಪಿ ಅಧ್ಯಕ್ಷ ದೇವದಾಸ, ಜಿ.ಪಂ. ಮಾಜಿ ಸದಸ್ಯ ಖಂಡಪ್ಪ ದಾಸನ್, ಮಹೇಂದ್ರರೆಡ್ಡಿ ಕಂದಕೂರ, ಬಸಣಗೌಡ ಯಲ್ಹೇರಿ ಇದ್ದರು.