ವಿಶ್ವಕರ್ಮ ಸಮಾಜ ಕಡೆಗಣನೆ; ಆರೋಪ
ಯಾದಗಿರಿ: ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವನ್ನು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ. ನಮ್ಮ ಸಮಾಜಕ್ಕೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ನಿರ್ಲಕ್ಷಿಸಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕ ಅಧ್ಯಕ್ಷ ಮಹೇಶ ವಿಶ್ವಕರ್ಮ ಆರೋಪಿಸಿದ್ದಾರೆ.
ನಗರದಲ್ಲಿ ಸಮಾಜದ ಜನತೆಗೆ ಸ್ಮಶಾನಕ್ಕಾಗಿ ರುದ್ರಭೂಮಿ ಇಲ್ಲ. ಸರ್ಕಾರದ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನೀಡಲಾಗಿಲ್ಲ. ಒಟ್ಟಾರೆ ಸರ್ಕಾರ ನೀಡುವ ಯಾವುದೇ ಸವಲತ್ತಿಗೂ ನಮ್ಮನ್ನು ಪರಿಗಣಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತ ಬರಲಾಗಿದೆ ಎಂದವರು ಹೇಳಿದ್ದಾರೆ. ಸಮಾಜದ ಯಾವುದೇ ವ್ಯಕ್ತಿಗೆ ರಾಜಕೀಯ ಸ್ಥಾನ ಮಾನ ನೀಡದೆ ರಾಜಕೀಯವಾಗಿ ಮೂಲೆ ಗುಂಪು ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಯಾರೂ ಮುಂದಾಗದೆ ಇರುವ ಕಾರಣ ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.