ಕೊಲ್ಲೂರ 'ಕೈ' ಕಾರ್ಯಕರ್ತರ ವಿರೋಧವಿಲ್ಲ: ಪರಸರೆಡ್ಡಿ
ಶಹಾಬಾದ್: ವಲಯದ ಕೊಲ್ಲೂರಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕ ಪ್ರಿಯಾಂಕ್ ಖರ್ಗೆಯವರ ಕುರಿತು ತಪ್ಪು ಅಭಿಪ್ರಾಯವಿಲ್ಲ. ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಗೆಲವಿಗೆ ಶ್ರಮಿಸಲಿದ್ದಾರೆಂದು ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣಗೌಡ ಪರಸರೆಡ್ಡಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರಿಂದ ವಿರೋಧ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಮುಖಂಡರಾದ ವಸಂತ ಸಾಹುರವರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಡಾ. ಮಾಲಕರೆಡ್ಡಿ, ಚನ್ನಾರೆಡ್ಡಿ ತುನ್ನೂರ, ಲಿಂಗಾರೆಡ್ಡಿ ಬಾಸರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಚೆನ್ನಾರೆಡ್ಡಿ ತುನ್ನೂರ, ಲಿಂಗಾರೆಡ್ಡಿ ಬಾಸರೆಡ್ಡಿಯವರಿಗೆ ಯಾವುದೇ ಸ್ಥಾನಮಾನ ನೀಡದ ಬಗ್ಗೆ ಚರ್ಚೆ ನಡೆದಿತ್ತು. ಡಾ. ಮಾಲಕರೆಡ್ಡಿಯವರು ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಸೂಕ್ತ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಿದ್ದು, ನಮ್ಮ ಭಾಗದ ಭಾಗಣ್ಣಗೌಡ ಸಂಕನೂರವರಿಗೆ ಡಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಪಕ್ಷದವರು ತಕರಾರು ಮಾಡಿಲ್ಲ: ಗ್ರಾಮದಲ್ಲಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಡಾ. ಮಾಲಕರೆಡ್ಡಿಯವರು ಗ್ರಾಮಕ್ಕೆ ಆಗಮಿಸಿದಾಗ ತಕರಾರು ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ಗ್ರಾಮದ ಕಾಂಗ್ರೆಸ್ ಮುಖಂಡರಾದ ಕೃಷ್ಣಾರೆಡ್ಡಿ, ಭಾಗಪ್ಪ ಯಾದಗಿರಿ, ಶರಣಗೌಡ ಅನ್ನದಾನ, ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರೊಂದಿಗೆ ಯಾವುದೇ ತಕರಾರು ನಡೆಸಿಲ್ಲ. ಪಕ್ಷದ ಏಳ್ಗೆ, ಶಾಸಕರ ಅಭಿವೃದ್ಧಿ ಕಾರ್ಯವನ್ನು ಸಹಿಸದ ಕೆಲವರಿಂದ ಅನಾವಶ್ಯಕ ಕಿರಿಕಿರಿ ಉಂಟಾಗಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ತಲೆಕೆಡಿಸಿಕೊಳ್ಳದೆ, ಪಕ್ಷದ ಗೆಲವಿಗೆ ಶ್ರವಿಸಲಿದ್ದಾರೆಂದು ಸ್ಪಷ್ಟನೆ ನೀಡಿದರು.