ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗೌಡಕಿ ಗತ್ತಿನ ರಾಜಕಾರಣಿಗಳೇ ಹೆಚ್ಚು...

Lingaraj Badiger
Updated On : 15 Apr 2014, 10:59 am

ಕ.ಪ್ರ. ವಾರ್ತೆ, ಗುಲ್ಬರ್ಗ, ಏ.14
'ಹೈ-ಕ ಹಿಂದುಳಿದಿದೆ. ಹೆಚ್ಚಿನ ಅನುದಾನ ಬೇಕೇ ಬೇಕು...'
- ಇದು ಹೈ-ಕ 6 ಜಿಲ್ಲೆಗಳ ರಾಜಕಾರಣಿಗಳೆಲ್ಲರ ಅವಕಾಶ ಸಿಕ್ಕಾಗೆಲ್ಲ ನೀಡೋ ಹೇಳಿಕೆ. ಹೀಗೆ ಹೆಚ್ಚಿನ ಅನುದಾನಕ್ಕಾಗಿ ಡಿಮ್ಯಾಂಡ್ ಸಲ್ಲಿಸುವ ಮುಂಚೆ ಹೈ-ಕ ಅಭಿವೃದ್ಧಿ ಮಂಡಳಿ, ಡಾ. ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯ ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಎಚ್ಕೆಆರ್‌ಡಿಬಿ, ಹೆಚ್ಚುವರಿ ಅನುದಾನ, ಸಿಎಂ ನಗರೋತ್ಥಾನ... ಸುವರ್ಣ ಗ್ರಾಮೋದಯ ಎಂದು ಹೈ-ಕ ನೆಲಕ್ಕೆ ಹರಿದು ಬಂದ ಅನುದಾನ ಎಷ್ಟು ಎಂದೋ ಹಾಗೇ ಬಂದ ಅನುದಾನದ ಹೊಳೆ ಈ ಪ್ರದೇಶದ ಅಸಮಾನತೆ ಕಲೆ ಕೀಳಿತೇ ಎಂದು ಚಿಂತನೆ ನಡೆಸೋದೇ ಇಲ್ಲ.
ಏಕೆಂದರೆ ಜನನಾಯಕರಿಗೆ ಅನುದಾನ ಹೆಚ್ಚುವರಿ ಬರಬೇಕಷ್ಟೆ. ಹಾಗೇ ಹರಿದು ಬರುವ ಅನುದಾನ ನೀರಿನಂತೆ ವೆಚ್ಚವಾದರೂ ಇಲ್ಲಿನ ಹಿಂದುಳಿದಿರುವಿಕೆ ನೋಟ ಮಾತ್ರ ಹಾಗೇ ಉಳಿದುಕೊಂಡರೂ ಪರವಾಗಿಲ್ಲ ಎಂಬುದು ಅವರ ಧೋರಣೆ.
ಪ್ರಸಿದ್ಧ ಅರ್ಥಶಾಸ್ತ್ರಜ್ಞ ಡಾ. ನಂಜುಂಡಪ್ಪ ಸಿದ್ಧಪಡಿಸಿದ ಪ್ರಾದೇಶಿಕ ಅಸಮಾನತೆ ನಿವಾರಣೆ ವರದಿಯಲ್ಲಿ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ತಾಲೂಕುಗಳು 33. ಈ ಪೈಕಿ 22 ಹೈ-ಕ ಭಾಗದ 6 ಜಿಲ್ಲೆಗಳಲ್ಲಿವೆ ಎಂಬುದು ಇಲ್ಲಿನ ಪ್ರಗತಿ(ಅವನತಿ)ಗೆ ಹಿಡಿದ ಕನ್ನಡಿ. ಇದಲ್ಲದೆ 6 ಮಧ್ಯಮ ಹಿಂದುಳಿದ, 2 ಹಿಂದುಳಿದ ತಾಲೂಕುಗಳು ಇರುವುದೂ ಹೈ-ಕ ನೆಲದಲ್ಲೇ. ಹೀಗಾಗಿ ಹೈ-ಕ ಭಾಗದಲ್ಲಿ ಅನುದಾನದ ಹೊಳೆ ಹರಿದರೂ ಅದ್ಯಾಕೆ ಇಲ್ಲಿನ ಮಾನವಾಭಿವೃದ್ಧಿ ಆಗಲಿಲ್ಲ, ಜೀವನ ಮಟ್ಟದಲ್ಲಿ ಸುಧಾರಣೆ ಕಾಣಲಿಲ್ಲ ಯಾಕೆ? ಜನನಾಯರಕರೇ ಉತ್ತರಿಸಬೇಕಷ್ಟೆ.
ಕೋಟಿ ಕೋಟಿ ಅನುದಾನ: 1991-92ರಲ್ಲಿ ಸ್ಥಾಪನೆಯಾಗಿರುವ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ 2 ದಶಕಗಳಲ್ಲಿ ಹರಿದು ಬಂದ ಅನುದಾನ 1,300 ಕೋಟಿಗೂ ಅಧಿಕ. ರಸ್ತೆ-ಸೇತುವೆ(ಶೇ.40), ಸಮಾಜ- ಸಮುದಾಯ ಅಭಿವೃದ್ಧಿ(ಶೇ.35), ಅಂತರ್ಜಲ ಪ್ರಗತಿ(ಶೇ.25)ಗೆಂದು ಈ ಹಣ ಪ್ರಾಮಾಣಿಕವಾಗಿ ಖರ್ಚಾಗಿದ್ದರೆ ಈ ನೆಲದ ರಸ್ತೆಗಳೆಲ್ಲವೂ ಉದ್ಧಾರವಾಗಿರುತ್ತಿದ್ದವು. ಇಲ್ಲಿನ ಹರಿದು ಹೋಗಿರುವ, ಇನ್ನೇನು ಇಂದೋ, ನಾಳೆಯೋ ಎಂದು ಮುರಿದು ಬೀಳುವ ಹಂತ ತಲುಪಿರುವ ಸೇತುವೆಗಳು ಹಸನಾಗುತ್ತಿದ್ದವು.
ಸರ್ವ ಸಮುದಾಯದ ಪ್ರಗತಿ ಯೋಜನೆಗಳಿಗೆ ಇಂಬು ದೊರಕುತ್ತಿತ್ತಲ್ಲದೆ ಅಂತರ್ಜಲ ವೃದ್ಧಿಯಾಗಿ ಇಲ್ಲಿ ಅಭಿವೃದ್ಧಿ ಹಾಗೂ ಅರಣ್ಯ, ಜನಜೀವನ ಹಸಿರು ಚಿಗುರಿ ಹೆಮ್ಮರವಾಗುತ್ತಿತ್ತು. ಆದರೆ ವಾಸ್ತವದಲ್ಲಿ ಆದದ್ದೇನು...?
ಕಳಪೆ ಕಾಮಗಾರಿಗಳ ಹಾವಳಿ ಇಲ್ಲಿನ ಎಲ್ಲಾ ಯೋಜನೆಗಳನ್ನು ನುಂಗಿ ನೀರು ಕುಡಿಯಿತು. ಅನುದಾನದ ಹೊಳೆ ಉಕ್ಕಿ ಬಂದರೂ ಅದರಲ್ಲಿ ಭ್ರಷ್ಟರು, ಅಪ್ರಾಮಾಣಿಕರು ಮಿಂದೆದ್ದರೇ ಹೊರತು ಪ್ರಾಮಾಣಿಕರಿಗೆ ಅದರಲ್ಲಿನ 'ಕಿಲುಬು ಕಾಸು' ಸಹ ಲಾಭವಾಗಲಿಲ್ಲ ಎಂಬುದೇ ದುರಂತ.
ನಾಮ್ ಕಾ ವಾಸ್ತೆ...: ಅರ್ಥಶಾಸ್ತ್ರಜ್ಞ ಡಾ. ನಂಜುಂಡಪ್ಪ ಪ್ರಾದೇಶಿಕ ಅಸಮಾನತೆ ನೋವು ನಿವಾರಣೆಗೆ ಅಷ್ಟ ವಾರ್ಷಿಕ ಯೋಜನೆ ರೂಪಿಸಿಕೊಂಡು ವಾರ್ಷಿಕ 2 ಸಾವಿರ ಕೋಟಿಯಂತೆ 16 ಸಾವಿರ ಕೋಟಿ ಹಣ ವಿನಿಯೋಗಿಸಬೇಕು ಎಂದು ತಮ್ಮ ವೈಜ್ಞಾನಿಕ ಆಧಾರದ ಅಧ್ಯಯನ ವರದಿಯಲ್ಲಿ ಮಹತ್ವದ ಶಿಫಾರಸು ಮಾಡಿದ್ದರು. ಈ ಶಿಫಾರಸಿಗೆ ಪ್ರತಿಯಾಗಿ ಸರ್ಕಾರ ಏನನ್ನೂ ಹೇಳದೆ ಮೌನವಾಗಿದೆ. ಮೂಲ ಚಿಂತನೆಗಳಿಗೆ ಎಳ್ಳು-ನೀರು ಬಿಟ್ಟಿದ್ದರಿಂದ ವರದಿ ಅನುಷ್ಠಾನವೂ ನಾಮ್ ಕಾ ವಾಸ್ತೆ(ಹೆಸರಿಗೆ ಮಾತ್ರ) ಎಂಬಂತಾಯ್ತು.

ಹಲವರದ್ದು ಗೌಡಕಿ ಗತ್ತು, ಕೆಲವರದ್ದು ಅಮಾಯಕತೆ ಸೋಗು
ಸದಾ ಒಂದಿಲ್ಲೊಂದು ರೂಪದಲ್ಲಿ ರಾಜ್ಯ ರಾಜಕೀಯದಲ್ಲಿ ಹೈ-ಕ ಮಂದಿ ಇದ್ದೇ ಇರುತ್ತಾರಾದರೂ ಇವರ್ಯಾರಿಗೂ ಹಿಂದುಳಿದ ತಮ್ಮವರ ಬಗ್ಗೆ ಕಾಳಜಿ ಕಮ್ಮಿ ಎಂಬುದಕ್ಕೆ ಇದಕ್ಕಿಂತ ಅನ್ಯ ಉದಾಹರಣೆ ಬೇಕೇ? ಇಲ್ಲಿನ ರಾಜಕಾರಣಿಗಳಿಗೆ ಗೌಡಕಿ ಗತ್ತು, ಜಮೀನ್ದಾರಿ ಸ್ವಭಾವ, ಸಲಾಮಿ-ಗುಲಾಮಿ ಸಂಸ್ಕೃತಿ ಅಚ್ಚುಮೆಚ್ಚು. ಆಳುವವರು ಬಂದರೆ ಸುಮ್ಮನಿರುತ್ತಾರೆ, ಮೆತ್ತಗಿನವರು ಸಿಕ್ಕರೆ ಸವಾರಿ ಮಾಡುತ್ತಾರೆ, ಜನನಾಯಕರ ಈ ಸ್ವಭಾವವೇ ಹೈ-ಕ ಹಿಂದುಳಿಯಲು ಕಾರಣ. ಹೈ-ಕ ರಾಜಕಾರಣಿಗಳಲ್ಲಿ ಹಲವರದ್ದು ಗತ್ತು- ಗಮ್ಮತ್ತಾದರೆ, ಇನ್ನೂ ಕೆಲವರದ್ದು ತಮಗೇನು ಗೊತ್ತಿಲ್ಲ ಎಂಬ ನಾಜೂಕಿನ ರಾಜಕಾರಣ. ಇಂತಹ ಸೋಗಿನ ಜನನಾಯಕರೇ ಈ ಭಾಗದ ಸರ್ವತೋಮುಖ ಪ್ರಗತಿಗೆ ಗ್ರಹಣ ಅಮರುವಂತೆ ಮಾಡಿದವರು ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲಾ ಸೋಗು ಹಾಕುವ ನಾಯಕರಿಂದಲೇ ಅಲ್ಲವೇ ಹೈ-ಕ ಕೋಟಿಗಟ್ಟಲೇ ಅನುದಾನ ದೊರಕಿದರೂ ಹಿಂದುಳಿದಿರುವಿಕೆ ನೋವಿನಿಂದ ಇಂದಿಗೂ ಮುಕ್ತಿ ಕಂಡಿಲ್ಲ.

ಈಗ ಎಚ್ಕೆಆರ್‌ಡಿಬಿ ಬಂತು...
ಹಿಂದುಳಿದ ಪ್ರದೇಶಗಳ ಪ್ರಗತಿಗೆ ನಿರೀಕ್ಷಿತ ಕೊಡುಗೆ ನೀಡದೆ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ, ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗಳೆರಡೂ ಮುಗ್ಗರಿಸಿದ್ದ ಸಂದರ್ಭದಲ್ಲೇ ಕಲಂ 371(ಜೆ) ಅನ್ವಯ ರಾಜ್ಯಪಾಲರ ಸುಪರ್ದಿನಲ್ಲಿ ರಚನೆಯಾಗಿದ್ದೇ ಹೈ-ಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ(ಎಚ್ಕೆಆರ್‌ಡಿಬಿ). ಹೆಸರಲ್ಲಷ್ಟೇ ಬದಲಾವಣೆ, ಇಲ್ಲಿಯೂ ರಾಜಕೀಯವಾಗಿಯೇ ಅಧ್ಯಕ್ಷ, ಸದಸ್ಯರ ಆಯ್ಕೆ ನಡೆದದ್ದು ಸ್ಪಷ್ಟ.
ಕಾಂಗ್ರೆಸ್ ಆಡಳಿತವಿರುವ ಈ ದಿನಗಳಲ್ಲಿ ಈ ಮಂಡಳಿಗಿರುವ ಸದಸ್ಯರಲ್ಲಿ ಸಿಂಹಪಾಲು ಕಾಂಗ್ರೆಸ್ಸಿಗರದ್ದೇ. ಹೀಗಾಗಿ ಶಾಸಕರೇ ಹೆಚ್ಚಿನ ಸಂಖ್ಯೆ ಸದಸ್ಯರಾಗಿರುವ ಈ ಎಚ್ಕೆಆರ್‌ಡಿಬಿಯಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಜಾರಿಗೊಂಡ ಹೊಸತರಲ್ಲೇ ಗೊತ್ತಾಗಿಬಿಟ್ಟಿದೆ.
ಹೆಚ್ಚಿನ ಸಂಖ್ಯೆಯಲ್ಲಿ ತಜ್ಞರನ್ನೊಳಗೊಂಡು, ಹೈ-ಕ ಅಸಮಾನತೆಯ ನೋವಿಗೆ ಮದ್ದಾಗಬೇಕಿದ್ದ ಎಚ್ಕೆಆರ್‌ಡಿಬಿ ಸ್ಥಾಪನೆಯ ಮೊದಲ ಹಂತದಲ್ಲೇ ಎಚ್ಕೆಎಡಿಬಿ, ಡಾ. ನಂಜುಂಡಪ್ಪ ವರದಿ ಉನ್ನತಾಧಿಕಾರ ಸಮಿತಿಯಂತೆ ರಾಜಕೀಯ ಪುನರ್ವಸತಿ ಕೇಂದ್ರವಾಗಿ, ಸರ್ಕಾರದ ಖಜಾನೆಗೆ ಬಿಳಿಯಾನೆಯಾಗಿಯೂ ಪರಿಣಮಿಸುವ ಲಕ್ಷಣಗಳೇ ಗೋಚರಿಸಿದ್ದು ದುರಂತ.


ಹಣ ವೆಚ್ಚವಾಗಿದ್ದೂ ಅಷ್ಟಕ್ಕಷ್ಟೇ
ನಂಜುಂಡಪ್ಪ ಸಮಿತಿ ಅಡಿಯಲ್ಲಿ ರೆಗ್ಯೂಲರ್ ಬಜೆಟ್ ರೂಪದಲ್ಲಿ ಹರಿದು ಬಂದಿರುವ ಹಣವೂ ವೆಚ್ಚವಾಗಿದ್ದು ಅಷ್ಟಕ್ಕಷ್ಟೆ ಎಂಬುದು ವಿಶೇಷ. 2007- 08ರಲ್ಲಿ ಸಮಿತಿಗೆ 1,571 ಕೋಟಿ ಮೀಸಲಿತ್ತು. ಈ ಪೈಕಿ 951.44 ಕೋಟಿ ಬಿಡುಗಡೆಯಾದರೆ ಖರ್ಚಾಗಿದ್ದು, 945 ಕೋಟಿ. 2008-09ರಲ್ಲಿ 2,547 ಕೋಟಿ ಮೀಸಲಿತ್ತು, ಬಿಡುಗಡೆಯಾದ ಹಣ 1,710 ಕೋಟಿ.
2009-10ರಲ್ಲಿ 2,578 ಕೋಟಿ ಮೀಸಲಾಗಿದ್ದರೆ, 2,033 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಈ ಪೈಕಿ 1,919 ಕೋಟಿ ವೆಚ್ಚವಾಗಿದೆ. 2010-11ರಲ್ಲಿ 2,584 ಕೋಟಿ ಮೀಸಲಾಗಿತ್ತು. ಈ ಪೈಕಿ 2,072 ಕೋಟಿ ಬಿಡುಗಡೆ, 2,066 ಕೋಟಿ ವೆಚ್ಚವಾಗಿದೆ. 2011-12ರಲ್ಲಿ 2,984 ಕೋಟಿ ಮೀಸಲಿತ್ತು. ಈ ಪೈಕಿ ವೆಚ್ಚವಾಗಿದ್ದು 2,384 ಕೋಟಿ.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement