ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ
ಕನ್ನಡಪ್ರಭ ವಾರ್ತೆ ಯಾದಗಿರಿ ಏ.14
ಇದೇ 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ್ ಹೇಳಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಚುನಾವಣೆಗಾಗಿ 1,107 ಪ್ರಿಸೈಡಿಂಗ್, 3321 ಪೋಲಿಂಗ್ ಅಧಿಕಾರಿಗಳು ಮತ್ತು 1107 ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ. ಅದರಂತೆ 17 ಎಂಸಿಸಿ ತಂಡಗಳು, 14 ಫ್ಲೈಯಿಂಗ್ ಸ್ಕ್ವಾಡ್ಸ್ ತಂಡಗಳು, 10 ವಿಡಿಯೋ ಸರ್ವೆಲನ್ಸ್ ತಂಡಗಳು, 14 ಸ್ಟಾಟಿಕ್ ಸರ್ವೆಲನ್ಸ್ ತಂಡಗಳು, 4 ವಿಡಿಯೋ ವಿವಿಂಗ್ ತಂಡಗಳು, 71 ಸೆಕ್ಷನ್ ಅಧಿಕಾರಿಗಳ ತಂಡಗಳು, 4 ಸಹಾಯಕ ವೆಚ್ಚ ವೀಕ್ಷಕರ ತಂಡಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
41,660 ಹೆಚ್ಚುವರಿ ಮತದಾರರು: ಜಿಲ್ಲೆಯಲ್ಲಿ ಒಟ್ಟು 8,44,609 ಮತದಾರರರಿದ್ದು ಅವರಲ್ಲಿ 4,25,500 ಪುರುಷ, 4,18,609 ಮಹಿಳಾ ಹಾಗೂ ಇತರೆ 68 ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಒಟ್ಟು 41,660 ಹೆಚ್ಚುವರಿ ಮತದಾರರನ್ನು ಸೇರಿಸಲಾಗಿದೆ. ಅದರಲ್ಲಿ 22,012 ಪುರುಷ, 19,580 ಮಹಿಳಾ ಮತದಾರರು, 68 ಇತರೆ ಮತದಾರರು ಹೆಚ್ಚುವರಿಯಾಗಿ ಮತದಾನ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 8,33,368 ಮತದಾರರಿಗೆ ಎಪಿಕ್ಕಾರ್ಡ್ ವಿತರಿಸಿದ್ದು, ಶೇ.98.12ರಷ್ಟು ಎಪಿಕ್ ಕಾರ್ಡ್ ವಿತರಣೆಯಲ್ಲಿ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಈ ಚುನಾವಣೆಗಾಗಿ ಒಟ್ಟು 1,006 ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 188 ಅತಿಸೂಕ್ಷ್ಮ ಮತ್ತು 208 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲಾದ್ಯಂತ ಒಟ್ಟು 748 ಮತದಾನ ಸ್ಥಳಗಳನ್ನು ಗುರುತಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಪ್ರಥಮ ಮತ್ತು ದ್ವಿತೀಯ ರ್ಯಾಂಡಮೈಜೇಷನ್ ಪೂರ್ಣಗೊಳಿಸಿದೆ. ಅದರಂತೆ ಸಿಬ್ಬಂದಿಗೆ 2 ಸುತ್ತಿನಲ್ಲಿ ತರಬೇತಿ ಸಹ ನೀಡಿದೆ. ಈ ಚುನಾವಣೆಗೆ 1148 ಬ್ಯಾಲಟ್ ಯೂನಿಟ್ ಮತ್ತು 1148 ಕಂಟ್ರೋಲ್ ಯೂನಿಟ್ಗಳನ್ನು ಬಲಸಲಾಗುತ್ತಿದೆ. 40 ಮತದಾನ ಕೇಂದ್ರಗಳನ್ನು ವೆಬ್ಕಾಸ್ಟಿಂಗ್ಗೆ ಗುರುತಿಸಲಾಗಿದೆ.
14 ಚೆಕ್ ಪೋಸ್ಟ್: ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ಉಲ್ಲಂಘಣೆ ಪ್ರಕರಣಗಳನ್ನು ನಿಯಂತ್ರಸಲು ಜಿಲ್ಲೆಯಲ್ಲಿ 14 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅದರಂತೆ 340 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲಾದ್ಯಂತ ಅಬಕಾರಿ ಒಳಗೊಂಡಂತೆ 98 ನೀತಿ ಸಂಹಿತೆ ಉಲ್ಲಂಘಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅದರಂತೆ ಅಬಕಾರಿ ಇಲಾಖೆಯಿಂದ 58 ಪ್ರಕರಣ ದಾಖಲಿಸಿಕೊಂಡಿದ್ದು, 15.71 ಲಕ್ಷ ವೆಚ್ಚ 1529 ಲೀ. ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ. ಅದರಂತೆ 4 ವಾಹನಗಳನ್ನು ಜಪ್ತಿ ಪಡಿಸಿಕೊಂಡು 40 ಜನರನ್ನು ಬಂಧಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
40 ಮಾದರಿ ಮತದಾನ ಕೇಂದ್ರ: ಜಿಲ್ಲಾದ್ಯಂತ 40 ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಅಗತ್ಯ ಸೌಲಭ್ಯ ಪೂರೈಸಲಾಗುತ್ತಿದೆ. ಮತದಾನ ಕೇಂದ್ರಗಳಲ್ಲಿ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಕುಡಿವ ನೀರಿನ ವ್ಯವಸ್ಥೆ, ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಮತದಾನ ಕೇಂದ್ರಗಳಿಂದ 2- 3 ಕಿಮೀ ದೂರದಿಂದ ಮತ ಚಲಾಯಿಸಲು ಹೋಗುವ ಮತದಾರರಿಗೆ ವಾಹನದ ವ್ಯವಸ್ಥೆ ಸಹ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇಂತಹ ಒಟ್ಟು 10 ಮತದಾನ ಕೇಂದ್ರಗಳಲ್ಲಿ ಗುರುತಿಸಲಾಗುತ್ತಿದೆ. ಅದರಂತೆ ಚುನಾವಣಾ ಸಿಬ್ಬಂದಿಗೆ 270ಕ್ಕೂ ಅಧಿಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಡಿಸಿ ಗಂಗೂಬಾಯಿ ಇದ್ದರು.
ಭದ್ರತೆಗೆ ಅಗತ್ಯ ಸಿಬ್ಬಂದಿ
ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಕೆಎಸ್ಆರ್ಪಿ, ಸಿಐಎಸ್ಎಫ್, ಪ್ಯಾರಾ ಮಿಲಟರಿ, ಕಾನ್ಸ್ಟೇಬಲ್ಸ್, ಹೋಂಗಾರ್ಡ್ಸ್ಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕ್ಲಸ್ಟರ್ಗಳಿಗೆ ಪ್ಯಾರಾ ಮಿಲಟರಿ ಪಡೆ ನಿಯೋಜಿಸಿದೆ. 93 ಹೆಡ್ ಕಾನ್ಸ್ಟೇಬಲ್, 260 ಕಾನ್ಸ್ಟೇಬಲ್, 300 ಹೋಂಗಾರ್ಡ್ ಮತ್ತು ಆಂಧ್ರಪ್ರದೇಶದಿಂದ 400 ಹೋಂ ಗಾರ್ಡ್ಗಳನ್ನು ಮತ್ತು 88 ಪೊಲೀಸ್ ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮ
ಶೇ. 40ಕ್ಕಿಂತ ಕಡಿಮೆ ಮತದಾನವಾಗಿರುವ ಗ್ರಾಮ ಮತ್ತು ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾನ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ಪೀಪ್ ಸಮಿತಿಯ ಅಧ್ಯಕ್ಷರಾದ ಎಸ್.ಎ ಜಿಲಾನಿ ತಿಳಿಸಿದರು. ಜಿಲ್ಲೆಯಲ್ಲಿ 2.50 ಲಕ್ಷ ಕರಪತ್ರ, 1 ಲಕ್ಷ ಫ್ಲೇಜ್ ಕಾರ್ಡ್, 5000 ಪೋಸ್ಟರ್ಗಳನ್ನು ವಿತರಿಸಲಾಗಿದೆ. 45ಕ್ಕೂ ಹೆಚ್ಚು ಹೋರ್ಡಿಂಗ್ ಅಳವಡಿಸಲಾಗಿದೆ. ಬೀದಿನಾಟಕ, ಬೈಕ್ ರ್ಯಾಲಿ, ಡೊಳ್ಳು ಕುಣಿತ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.