ಹೈ-ಕ 5 ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಲೆ: ಧರಂ
ಗುಲ್ಬರ್ಗ: ಗುಲ್ಬರ್ಗ, ಬೀದರ್ ಲೋಕಸಭಾ ಕ್ಷೇತ್ರ ಸೇರಿದಂತೆ ಹೈ-ಕ ಭಾಗದಲ್ಲಿರುವ 5 ಕ್ಷೇತ್ರಗಳಲ್ಲಿ ಯಾವುದೇ ಅನ್ಯ ಅಲೆಗಳಿಲ್ಲ, ಇಲ್ಲೇನಿದ್ದರೂ ಕಾಂಗ್ರೆಸ್ ಅಲೆ, ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಇಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಎಂದು ಬೀದರ್ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್ ಹೇಳಿದ್ದಾರೆ.
ಆಳಂದ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಅಲೆಯೂ ಇಲ್ಲಿಲ್ಲ, ಕಲಂ 371(ಜೆ) ಅನುಷ್ಠಾನಕ್ಕೆ ತಂದಿರುವ ನಮ್ಮ ಪರವೇ ಇಲ್ಲಿ ಹೆಚ್ಚಿನ ಅಲೆ ಇದೆ. ಹೈ-ಕ 5 ಸ್ಥಾನಗಳು ಕಾಂಗ್ರೆಸ್ ಮಡಿಲಿಗೆ ಬರಲಿವೆ ಎಂದು ಹೇಳಿದರು.
ಅಭಿವೃದ್ಧಿ ಅಲೆಯೇ ಇಲ್ಲಿ ಕೆಲಸ ಮಾಡುತ್ತದೆ. ಖರ್ಗೆ ಸಚಿವರಾಗಿ ತಾವು ವಹಿಸಿದ್ದ ಖಾತೆಗಳಲ್ಲಿ ಮಾಡಿರುವ ಪ್ರಗತಿ ದಾಖಲಾರ್ಹ. ಬೀದರ್ನಲ್ಲಿಯೂ ತಾವು ಮುಂಚೂಣಿಯಲ್ಲಿ ನಿಂತು ಅನೇಕ ಯೋಜನೆಗಳನ್ನು ಕ್ಷೇತ್ರದ ಪ್ರಗತಿಗೆ ಕೊಡುಗೆ ರೂಪದಲ್ಲಿ ನೀಡಿದ್ದಾಗಿ ಧರಂಸಿಂಗ್ ಹೇಳಿದರು. ಆಳಂದದಲ್ಲಿ ಬಿ.ಆರ್. ಪಾಟೀಲ್ ತಮಗೆ ಬೆಂಬಲ ನೀಡಿದ್ದರಿಂದ ಹೊಸ ಬಲ ಬಂದಿದೆ. ಕೆಜೆಪಿ ಶಾಸಕರಾಗಿದ್ದ ಪಾಟೀಲ್ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದು ಸ್ವಾಗತಾರ್ಹ ಕ್ರಮ ಎಂದರು.
ಬರುವ ದಿನಗಳಲ್ಲಿ ಏನೆಲ್ಲ ಪ್ರಗತಿ ಮಾಡಬಹುದಾಗಿದೆ ಎಂಬ ನೀಲ ನಕಾಶೆ ನಾವು ಹೊಂದಿದ್ದೇವೆ. ಜನತೆ ನಮಗೆ ಹರಸಲಿ, ಆಗ ಇನ್ನೂ ಹೆಚ್ಚಿನ ಕೆಲಸಗಳನ್ನು ನಾವು ಬೀದರ್ ಗುಲ್ಬರ್ಗ ಸೇರಿದಂತೆ ಹೈ-ಕ ಪಂಚ ಜಿಲ್ಲೆಗಳಲ್ಲಿ ಮಾಡಿಕೊಡುತ್ತೇವೆ ಎಂದು ಧರಂಸಿಂಗ್ ನುಡಿದರು.
ಗೆಲವಿಗೆ ಅಭೂತಪೂರ್ವ ಬೆಂಬಲ: ಧರಂಸಿಂಗ್(ಆಳಂದ ವರದಿ): ಎಲ್ಲೆಡೆ ಜನರ ಸಹಾಯ ಮತ್ತು ಸಹಕಾರದಿಂದ ನನಗೆ ಗೆಲವು ಒಲಿದು ಬರಲಿದೆ ಎಂದು ಬೀದರ್ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎನ್. ಧರಂಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಖಜೂರಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಶಾಸಕ ಬಿ.ಆರ್. ಪಾಟೀಲ್ ಮಾತನಾಡಿದರು. ಮೌಲಾ ಮುಲ್ಲಾ, ಅಲ್ಲಂಪ್ರಭು ಪಾಟೀಲ, ಶಿವರಾಜ ಭಾಷಗಿ, ವಿಠ್ಠಲರಾವ್ ಪಾಟೀಲ, ಶಿವುಪುತ್ರಪ್ಪಾ ಪಾಟೀಲ, ಮಹಮದ್ ಮಕ್ದುಮ್ ಅನ್ಸಾರಿ ಕಾಲೇಮಿರ್, ಶಕುಂತಲಾ ಎಚ್. ಪಾಟೀಲ, ಗುರುಶರಣ ಪಾಟೀಲ ಕೋರಳ್ಳಿ ಇದ್ದರು.