ಚಿತ್ತಾಪುರ: 232 ಮತಗಟ್ಟೆ ಸ್ಥಾಪನೆ
ಚಿತ್ತಾಪುರ: ಗುಲ್ಬರ್ಗ ಲೋಕಸಭೆ ಚುನಾವಣೆಯಲ್ಲಿ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2.05 ಲಕ್ಷ ಮತದಾರರು ಮತಚಲಾವಣೆ ಮಾಡಲು ಹಕ್ಕು ಹೊಂದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ದೊಡ್ಡ ಬಸವರಾಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮತದಾರರಿಗೆ ಮತಚೀಟಿಗಳು ಮನೆ ಮನೆಗೆ ತಲುಪಿಸಲಾಗಿದೆ. ಕ್ಷೇತ್ರದಲ್ಲಿ 232 ಮತಗಟ್ಟೆ ಕೇಂದ್ರಗಳಿವೆ. ಅದರಲ್ಲಿ ಒಟಂಟು 2.05 ಲಕ್ಷ ಮತದಾರರ ಪೈಕಿ 1.14 ಲಕ್ಷ ಪುರುಷ ಹಾಗೂ 1.01 ಲಕ್ಷ ಮಹಿಳೆಯರು ಹಾಗೂ 23 ಜನರು ಇತರರು ಮತದಾನ ಮಾಡಲಿದ್ದಾರೆ.
2 ಸಾವಿರ ಸಿಬ್ಬಂದಿ: 1134 ಮತಗಟ್ಟೆ ಅಧಿಕಾರಿಗಳು, 210 ಸಿಬ್ಬಂದಿ, 22 ಸೆಕ್ಟರ್ ಆಫಿಸರ್ ಸೇರಿದಂತೆ ಸುಮಾರು 2 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಂದು ಮತದಾನ ಕೇಂದ್ರಕ್ಕೆ 4 ಜನ ಸಿಬ್ಬಂದಿ, ಓರ್ವ ಪೊಲೀಸ್, ಓರ್ವ ಸಿಪಾಯಿ ಸೇರಿ 6 ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 232 ಮತಗಟ್ಟೆಗಳಿಗೆ 2 ಸಾವಿರ ಸಿಬ್ಬಂದಿ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
10 ಕಡೆ ವೆಬ್ ಕೇಂದ್ರಗಳು: ಮತದಾನ ವೀಕ್ಷಿಸಲು 63 ಮೈಕ್ರೋ ಅಬ್ಜರ್ವೇರ್, 123 ಮತಗಟ್ಟೆಗಳನ್ನು ನೋಡಿಕೊಳ್ಳುತ್ತಾರೆ. 67 ಕಡೆ ವೀಡಿಯೋ ಕ್ಯಾಮರಾ ಹಾಗೂ 10 ಕಡೆ ವೆಬ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಯನ್ನು ಮಾದರಿಯ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಅಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಮತಗಟ್ಟೆಯ ಅಧಿಕಾರಿಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಎಸ್ಎಂಎಸ್ ಹಾಗೂ ಐವಿಆರ್ ಸಿಸ್ಟಮ್ ಅಳವಡಿಸಲಾಗಿದೆ. ಚುನಾವಣೆ ಸಿಬ್ಬಂದಿಗೆ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಬೆಳಗ್ಗೆ 6.15ಕ್ಕೆ ಅಣುಕು ಮತದಾವನ್ನು ಎಜೆಂಟರ್ ಮೂಲಕ ಆರಂಭಿಸಿ ಮತಯಂತ್ರ ಪರೀಕ್ಷಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಗುರುನಾಥ ವೈದ್ಯ, ಡಿವೈಎಸ್ಪಿ ಮಹೇಶ ಮೇಘಣ್ಣನವರ, ಸಿಪಿಐ ಶಂಕರಗೌಡ ಪಾಟೀಲ್, ಪಿಎಸೈ ಸಂಜುಕುಮಾರ ಇದ್ದರು.