ಬಹುತೇಕ ಮತದಾನ ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ
ಶಹಾಪುರ: ಬಿಸಿಲಿನ ಆರ್ಭಟಕ್ಕೆ ಜನತೆ ಮನೆ ಬಿಟ್ಟು ಹೊರಗೆ ಬಾರದ ಪರಿಣಾಮ ಮತದಾನದ ಬಗೆಗಿನ ನಿರಾಸಕ್ತಿಯಿಂದಾಗಿ ತಾಲೂಕಿನಾದ್ಯಂತ ಕೆಲವು ಮತದಾನ ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ತಾಲೂಕಿನೆಲ್ಲೆಡೆ ಶೇ. 52ರಷ್ಟು ಮತದಾನ ನಡೆದ ವರದಿಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರದ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬೆಳಗಿನ ಜಾವ ಕೆಲವು ಮತಕೇಂದ್ರಗಳಲ್ಲಿ ಚುರುಕಿನ ಮತದಾನ ನಡೆದರೂ ಬಿಸಿಲಿನ ತಾಪ ಹೆಚ್ಚಿದಂತೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿ ಸಂಜೆಯಾಗುತ್ತಲೇ ಪ್ರಕ್ರಿಯೆ ಮತ್ತೆ ಚುರುಕಾಯಿತು.
ಕೈಕೊಟ್ಟ ವಿದ್ಯುನ್ಮಾನ ಮತಯಂತ್ರ, ತಡವಾಗಿ ಪ್ರಾರಂಭವಾದ ಮತಯಂತ್ರ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಡಂಗೇರಾ.ಬಿ, ಕೆಂಭಾವಿ, ಹದನೂರು ಗ್ರಾಮದ ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ 1 ಗಂಟೆ ತಡವಾಗಿ ಮತದಾನ ಆರಂಭವಾದ ವರದಿಯಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಅಧ್ಯಕ್ಷ ಭಗವಂತ್ರಾಯ ಬಳೂಂಡಗಿ, ಗುತ್ತಿಪೇಟೆ ಶಾಲೆಯ ಮತಗಟ್ಟೆಯೊಂದರಲ್ಲಿ ಪೋಲಿಂಗ್ ಏಜಂಟ್ಗಳಿಗೆ ನೀಡಿದ ಮತದಾರರ ಪಟ್ಟಿಯಲ್ಲಿ 710 ಮತದಾರರಿದ್ದು, ಪ್ರಿಸೈಡಿಂಗ್ ಅಧಿಕಾರಿಗಳ ಬಳಿ ಇರುವ ಮತದಾರರ ಪಟ್ಟಿಯಲ್ಲಿ 733 ಮತದಾರರ ಯಾದಿ ಇದೆ. ಇದರಿಂದ ಗೊಂದಲವಾಗುವದಿಲ್ಲವೇ ಎಂದು ಪ್ರಶ್ನಿಸಿ ಚುನಾವಣಾ ಅಧಿಕಾರಿಗಳಿಗೆ ಈ ಕುರಿತು ಪರಿಶೀಲಿಸಲು ಮನವಿ ಸಲ್ಲಿಸಿದ್ದಾರೆ.
ಕನ್ಯಾಕೋಳೂರು ಗ್ರಾಮದಲ್ಲಿ ನೀರಸ ಪ್ರತಿಕ್ರಿಯೆ: ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ಮತದಾನದ ಬಗ್ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದ್ದು, ಶೇ. 32ರಷ್ಟು ಮತದಾನವಾಗಿದೆ. ಇತ್ತೀಚೆಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತದಾನದಲ್ಲಿ ಹೆಚ್ಚು ಉತ್ಸಾಹ ತೋರಿಸದೆ ಇರುವುದು ಕಂಡುಬಂದಿದೆ.