ಯಂತ್ರದಲ್ಲಿ ಮತದಾರನ ಗುಟ್ಟು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.17
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ದಿನವಾದ ಏ.17ರ ಗುರುವಾರ ಗುಲ್ಬರ್ಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದೆ. ಮತಯಂತ್ರ ದೋಷದಿಂದ ಅಲ್ಲಲ್ಲಿ ಮತದಾನ ವಿಳಂಬವಾಗಿದ್ದು, ಮತದಾರರ ಕೋಪದಿಂದಾಗಿ 2 ಕಡೆ ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆಗಳನ್ನು ಹೊರತುಪಡಿಸಿದಲ್ಲಿ ಜಿಲ್ಲೆಯಲ್ಲಿ ಅಂದಾಜು ಶೇ.60ರಷ್ಟು ಮತದಾನವಾಗಿದೆ.
ಸೇಡಂ- ಶೇ.62
ಚಿತ್ತಾಪುರ- ಶೇ.62
ಅಫಜಲ್ಪುರ- ಶೇ.58
ಜೇವರ್ಗಿ- ಶೇ.60
ಗುಲ್ಬರ್ಗ (ದಕ್ಷಿಣ)- ಶೇ.60
ಗುಲ್ಬರ್ಗ (ಉತ್ತರ)- ಶೇ.58
ಗುಲ್ಬರ್ಗ (ಗ್ರಾಮೀಣ)- ಶೇ.57
ಗುರುಮಠಕಲ್- ಶೇ.59
ಉರಿ ಬಿಸಿಲಿಗೆ ಅಂಜಿ ಮತದಾರರು ಬೆಳಗ್ಗೆಯೇ ಸರತಿಯಲ್ಲಿ ನಿಂತು ಮತದಾನ ಮಾಡಿದ ನೋಟಗಳು ಕಂಡವು. ಅಫಜಲ್ಪುರ ತಾಲೂಕಿನ ಮದರಾ (ಕೆ), ಹತಗುಂದಾ, ಯಳವಂತಗಿ ಗ್ರಾಮಗಳಲ್ಲಿ ಮತಯಂತ್ರದಲ್ಲಿನ ದೋಷದಿಂದಾಗಿ ಮತದಾನ ತುಸು ವಿಳಂಬವಾಗಿ ಶುರುವಾಯ್ತು.
ಮತದಾನ ಬಹಿಷ್ಕಾರ: ಗುಲ್ಬರ್ಗ ತಾಲೂಕಿನ ಹಾಗರಗಾದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ಕಾರಣದಿಂದಾಗಿ ಈ ಊರಿನ 2 ಮತಗಟ್ಟೆಗಳಲ್ಲಿ ಕೇವಲ 1 ಮತದಾನವಾಗಿತ್ತು. ಸೇಡಂನ ಜಿಲೇಡಪಲ್ಲಿಯಲ್ಲಿಯೂ ಮತದಾನ ಬಹಿಷ್ಕಾರ ಹಾಕಲಾಗಿತ್ತಾದರೂ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಗ್ರಾಮಸ್ಥರು ಬಹಿಷ್ಕಾರ ವಾಪಸ್ ಪಡೆದರಲ್ಲದೆ ಮಧ್ಯಾಹ್ನ 12.30ಕ್ಕೆ ಮತದಾನ ಶುರುವಾಯ್ತು. ಚಿಂಚೋಳಿಯ ನಾಗಾ ಇದಲಾಯಿ ಗ್ರಾಮದ ಬಳಿ ತಿಮಲಾಪುರದಲ್ಲಿ ಮೂಲ ಸೌಕರ್ಯ ಕೊರತೆ ಎಂದು ಮತದಾನ ಬಹಿಷ್ಕರಿಸಲಾಗಿತ್ತು.
ಮಣ್ಣೂರಲ್ಲಿ 3,100 ಮತದಾನ: ಅಫಜಲ್ಪುರ ತಾಲೂಕಿನ ದೊಡ್ಡ ಗ್ರಾಮ ಮಣ್ಣೂರಲ್ಲಿ ಮತದಾನ ನೀರಸವಾಗಿತ್ತು. ಉರಿ ಬಿಸಿಲಿನ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬರಲೇ ಇಲ್ಲ. ಈ ಊರಲ್ಲಿ ಹೆಚ್ಚುಕಮ್ಮಿ 8ರಿಂದ 10 ಸಾವಿರ ಮತದಾರರಿದ್ದರೂ ಕೇವಲ 3,100ರಷ್ಟು ಮತದಾನವಾಗಿದೆ. ಇಲ್ಲಿರುವ 6 ಮತಗಟ್ಟೆಗಳಲ್ಲಿ ಗುರುವಾರ ಬೆಳಗ್ಗೆ, ಸಂಜೆ ಹೊತ್ತು ಮಾತ್ರ ಮತದಾರರ ಸರತಿ ಸಾಲು ಕಂಡಿತ್ತು. ಮಧ್ಯಾಹ್ನ 3 ಗಂಟೆ ಮತಗಟ್ಟೆಗಳಲ್ಲಿ ಮತದಾರರು ಕಾಣಲೇ ಇಲ್ಲ. ಬಿಸಿಲಿನಿಂದಾಗಿ ಹಾಗೂ ಅನೇಕರು ಕೆಲಸಕ್ಕೆಂದು ಊರು ಬಿಟ್ಟು ಪರ ಊರಿಗೆ ಹೋಗಿದ್ದರಿಂದ ಮತದಾನ ನೀರಸವಾಗಿದೆ ಎಂದು ಗ್ರಾಮಸ್ಥರು ಆಡಿಕೊಂಡರು.