ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಾಂಡಾಗಳಲ್ಲಿ ನೀರಸ ಮತದಾನ; ಅಸಮಾಧಾನ

Lingaraj Badiger
Updated On : 19 Apr 2014, 10:53 am

ಚಿಂಚೋಳಿ: ಬೀದರ್ ಲೋಕಸಭೆ ಕ್ಷೇತ್ರದ ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದಲ್ಲಿರುವ ಬಹುತೇಕ ತಾಂಡಗಳಲ್ಲಿ ಮತದಾನ ಅತ್ಯಂತ ನೀರಸವಾಗಿದ್ದು ನಿರೀಕ್ಷಿಸಿದಷ್ಟು ಮತದಾನವಾಗದಿರುವುದಕ್ಕೆ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರಿಗೆ ಅಸಮಾಧಾನವಾಗಿದೆ.
 ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 100 ತಾಂಡಗಳಿದ್ದು ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತದಾನವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ. ಉಮೇಶ ಜಾಧವ್ ಹಾಗೂ ಬಿಜೆಪಿಯ ಸುನೀಲ್ ವಲ್ಯಾಪುರೆ ತಾಂಡಗಳಲ್ಲಿರುವ ಜನರು ಮತ್ತು ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗಿದವರನ್ನು ಮತದಾನಕ್ಕೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಿ ಪ್ರಯಾಣ ವೆಚ್ಚವನ್ನು ಭರಿಸಿದ್ದರು. ಹೀಗಾಗಿ ತಾಂಡಗಳಲ್ಲಿ ಮತದಾನ ಅಧಿಕವಾಗಿತ್ತು.
 ಆದರೆ ಲೋಕಸಭೆ ಚುನಾವಣೆಯಲ್ಲಿ ಇಂತಹ ಯಾವದೇ ವ್ಯವಸ್ಥೆಯಿಲ್ಲದ ಕಾರಣ ಅನೇಕ ತಾಂಡಗಳಲ್ಲಿ ಜನರು ಮನೆ ಬಾಗಿಲು ಮುಚ್ಚಿ ಕೂಲಿ ಕೆಲಸಕ್ಕಾಗಿ ಹೋದವರು ಮರಳಿ ಬರಲಿಲ್ಲ. ಇದರಿಂದ ಜನಪ್ರತಿನಿಧಿಗಳು ಊಹೆ ಮಾಡಿದಷ್ಟು ಮತದಾನವಾಗಲಿಲ್ಲ. ತಾಲೂಕಿನ ಐನಾಪೂರ ವಲಯದಲ್ಲಿರುವ ಪಾಲತ್ಯಾ ತಾಂಡ, ಅಡಕಿಮೋಕ, ರಾಣಾಪೂರ, ಸಲಗರ ಕಾಲೋನಿ, ಡೊಂಗರು ನಾಯಕ, ಧರ್ಮುನಾಯಕ ತಾಂಡ, ರಾಮಶೆಟ್ಟಿ ನಾಯಕ ತಾಂಡ ಸೇರಿದಂತೆ ಅನೇಕ ತಾಂಡಗಳಲ್ಲಿ ಮತದಾನ ಅತ್ಯಂತ ನೀರಸವಾಗಿತ್ತು.
ಶೇ.57.46 ಮತದಾನ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.57.46ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದ್ದಾರೆ.
 ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ಮತದಾರರು- 1,80,366 ಇದ್ದು, ಇದರಲ್ಲಿ 1,03,366 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಪುರುಷರು- 53,597 ಮತ್ತು ಮಹಿಳೆಯರು-50,336 ಮತ ಚಲಾಯಿಸಿದ್ದಾರೆ. ಅತೀ ಹೆಚ್ಚು ಮತದಾನ ಕಲ್ಲೂರ ರೋಡ್ ಗ್ರಾಮದ ಮತಗಟ್ಟೆ ಸಂಖ್ಯೆ- 179 ರಲ್ಲಿ ಶೇ.74.3 ಆಗಿದೆ. ಅತೀ ಕಡಿಮೆ ಮತದಾನ ತಿರುಮಲಾಪುರ ಗ್ರಾಮದಲ್ಲಿ ಶೇ.1 ಆಗಿದೆ. ತಾಲೂಕಿನಲ್ಲಿ ಶಾಂತಿಯುತ ಮತದಾನವಾಗಿರುವುದಕ್ಕೆ ಚುನಾವಣಾಧಿಕಾರಿ ಮಂಜುನಾಥ, ಡಿವೈಎಸ್ಪಿ ರವಿಕುಮಾರ ಸಂತಸ ವ್ಯಕ್ತಪಡಿಸಿದ್ದಾರೆ.
ಮೋದಿಗಾಗಿ ಪಾದರಕ್ಷೆ ಬಿಟ್ಟ
ಕಾಳಗಿ: ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಪಾದರಕ್ಷೆ ಧರಿಸದೆ ಇರಲು ಅಭಿಮಾನಿಯೊಬ್ಬರು ನಿರ್ಧರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿನ ರಾಜಶೇಖರ ಮಾಕಪ ನೋರ ಕಳೆದ ಡಿಸೆಂಬರ್‌ನಿಂದ ಬರಿಗಾಲಲ್ಲಿ ಓಡಾಡುತ್ತಿದ್ದಾರೆ. ಸದೃಢ ಭಾರತ ನಿರ್ಮಾಣಕ್ಕೆ ಮೋದಿ ಪ್ರಧಾನಿ ಆಗಬೇಕೆನ್ನುವುದು ರಾಜಶೇಖರ ಅಭಿಪ್ರಾಯ. ಯುಪಿಎ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿದೆ. ಮೋದಿ ಪ್ರಧಾನಿ ಆದರೆ, ದೇಶದ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement