ತಿರುಮಲಾಪುರ: ಮತದಾನವಿಲ್ಲ
ಚಿಂಚೋಳಿ: ತಾಲೂಕಿನ ನಾಗಾಇದಲಾಯಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ತಿರುಮಲಾಪುರ ಗ್ರಾಮಕ್ಕೆ ಕೂಡು ರಸ್ತೆ ಸಂಪರ್ಕ ಕಾಮಗಾರಿ ಕಳಪೆ ಮಟ್ಟದ್ದಾಗಿರುವುದರಿಂದ ಗ್ರಾಮಸ್ಥರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕು ಚಲಾಯಿಸಲಿಲ್ಲ.
ಚಿಂಚೋಳಿ-ಮನ್ನಾಎಕ್ಕೆಳ್ಳಿ ರಾಜ್ಯ ಹೆದ್ದಾರಿ (ನಾಗಾಇದಲಾಯಿ)ಯಿಂದ ಕೇವಲ 3 ಕಿಮೀ ಅಂತರದಲ್ಲಿರುವ ತಿರುಮಲಾಪುರ ಗ್ರಾಮ ತಾಲೂಕಿನಲ್ಲಿಯೇ ಅತಿಕಡಿಮೆ ಜನಸಂಖ್ಯೆ ಮತ್ತು ಪುಟ್ಟ ಗ್ರಾಮವಾಗಿದೆ. ಕಳೆದ ಸಾಲಿನಲ್ಲಿ ರಸ್ತೆ ಸಂಪರ್ಕ ಒದಗಿಸಲು 2013-14ನೇ ಸಾಲಿನ ಜಿಪಂ ಅನುದಾನ # 3 ಲಕ್ಷ ವೆಚ್ಚದ ಕಾಮಗಾರಿಗೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಉಡಮನಳ್ಳಿ ಗ್ರಾಪಂ ವ್ಯಾಪ್ತಿಯ ಕರಕನಳ್ಳಿ ತಾಂಡದ ಜೈಸಿಂಗ್ ನಡೆಸಿದ ಕಳೆಪೆಮಟ್ಟದ ಕಾಮಗಾರಿಯಿಂದಾಗಿ ಮತ ಚಲಾಯಿಸಿಲ್ಲವೆಂದು ಗ್ರಾಮದ ಯುವಕ ರಮೇಶ ಉಡಮನಳ್ಳಿಕರ ತಿಳಿಸಿದ್ದಾರೆ.
ರಸ್ತೆ ಕಾಮಗಾರಿಯಲ್ಲಿ ಬರೀ ಮರುಂ ಹಾಕಿ ತಗ್ಗುಗಳನ್ನು ಮುಚ್ಚಲಾಗಿದೆ. ವಾಹನಗಳ ತಿರುಗಾಟಕ್ಕೂ ಬಾರದಂತಾಗಿದೆ. ಅಲ್ಲಲ್ಲಿ ದೊಡ್ಡ ಕಲ್ಲುಗಳಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದರ ಬಗ್ಗೆ ಜಿಪಂ ಸದಸ್ಯ ದೀಪಕ್ ನಾಗ ಪುಣ್ಯಶೆಟ್ಟಿ ಮತ್ತು ತಾಪಂ ಸದಸ್ಯೆ ಮಲ್ಲಮ್ಮ ಚಿತ್ರಶೇಖರ ಪಾಟೀಲ್ ಹಾಗೂ ಜಿಪಂ ಎಇಇ ರೇವಣಸಿದ್ದಪ್ಪಾ ಹಾಗರಗಿಯವರಿಗೆ ತಿಳಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹೀಗಾಗಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಲಾಯಿತೆಂದು ತಾಪಂ ಮಾಜಿ ಅಧ್ಯಕ್ಷೆ ಅಂಜನಮ್ಮ ನಾಯಕ ಹೇಳಿದರು.